ಕಾರ್ಕಳ : ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಯಾನೆ ಶ್ರೀಕಾಂತ್ (46 ವರ್ಷ) ನನ್ನು ಪೊಲೀಸರು ಉಡುಪಿ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆಸಿ ಗುಂಡಿಕ್ಕಿ ಕೊಂದಿದ್ದಾರೆ. 61 ಪ್ರಕರಣಗಳಲ್ಲಿ ಬೇಕಾಗಿದ್ದ ಈತನ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು
ಸೋಮವಾರ ರಾತ್ರಿ 9.00 ರಿಂದ11.00 ಗಂಟೆ ನಡುವೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪೇಟೆಯಿಂದ ಸುಮಾರು 10 ಕಿ. ಮೀ. ದೂರದ, ಉಡುಪಿ- ಚಿಕ್ಕಮಗಳೂರು ಜಿಲ್ಲೆಗಳ ಗಡಿ, ಪೀತಾಬೈಲು ದಟ್ಟ ಕಾಡಿನಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಎತ್ತರದ ಕಾಡಿನಿಂದ ಕೊರಕಲು ಕಾಲು ಹಾದಿಯಲ್ಲಿ ಇಳಿದು ಇಲ್ಲಿನ ಮನೆಯೊಂದಕ್ಕೆ ಅಕ್ಕಿ, ಬೇಳೆ ಪಡೆಯಲು ಈ ವಿಕ್ರಂ ಗೌಡ ಮತ್ತವನ ತಂಡ ಬರುತ್ತಿತ್ತು ವಾರದ ಹಿಂದೆಯೂ ಪೀತಾಬೈಲು ಕಾಡಿನಿಂದ ಹೊರಗೆ ಬಂದು ಇಲ್ಲಿನ ಮಲೆಕುಡಿಯರ ಮನೆಯೊಂದರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ನಕ್ಸಲ್ ನಿಗ್ರಹ ಪಡೆ ಯೋಧರು, ಆ ಮನೆಯವರನ್ನು ಮೊದಲೇ ತೆರವುಗೊಳಿಸಿ, ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು. ವಿಕ್ರಂಗೌಡ ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯಿತು ನಕ್ಸಲ್ ತಂಡ ಕೆಲಕಾಲ ಪ್ರತಿದಾಳಿ ಮೂಲಕ ಪ್ರತಿರೋಧ ಒಡ್ಡಿತು
ಈ ಹಿನ್ನೆಲೆಯಲ್ಲಿ ಎಎನ್‌ಎಫ್ ತಂಡ ಮಂಗಳವಾರ ಇಡೀ ದಿನ ಸುತ್ತಮುತ್ತಲಿನ ಕಾಡಿನಲ್ಲಿ ಕೂಂಬಿಂಗ್ ನಡೆಸಿತು. ಆದರೆ, ತಪ್ಪಿಸಿಕೊಂಡ ನಕ್ಸಲಿಯರ ಪತ್ತೆಯಾಗಿಲ್ಲ. ಈ ಮಧ್ಯೆ, ರಾಜ್ಯದಲ್ಲಿ ಇನ್ನೂ 4-5 ಸಕ್ರಿಯ ನಕ್ಸಲ್‌ಗಳಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ