ಬೆಂಗಳೂರು : ಮುಡಾ ಪ್ರಕರಣದಲ್ಲಿ ದಾಖಲೆ ಹಾಗೂ ಸತ್ಯಾಸತ್ಯತೆ ಪರಿಶೀಲಿಸದೆ ವಿವೇಚನಾರಹಿತವಾಗಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಅದನ್ನು ಹಿಂಪಡೆಯಬೇಕು. ಜತೆಗೆ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸ ಬೇಕು’ ಹೀಗೆಂದು ರಾಜ್ಯ ಪಾಲ ಗೆಹಲೋತ್ ಅವರಿಗೆ ಬಲವಾಗಿ ಸಲಹೆ ನೀಡುವ ನಿರ್ಧಾರವನ್ನು ಗುರುವಾರ ನಡೆದ ಸಚಿವರ ಪರಿಷತ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಜತೆಗೆ, ರಾಜ್ಯಪಾಲರು ಸಚಿವರ ಪರಿಷತ್ ಸಲಹೆ ಅಥವಾ ಸಚಿವ ಸಂಪುಟ ಸಭೆಯ ಸೂಚನೆ ಮೇರೆಗೆ ನಡೆದುಕೊಳ್ಳಬೇಕೇ ಹೊರತು ತಮ್ಮ ವಿವೇಚನೆಯ ಆಧಾರದಲ್ಲಿ ಅಲ್ಲ ಎಂದೂ ನಿರ್ಣಯ ಕೈಗೊಳ್ಳಲಾಗಿದೆ.
ಅಲ್ಲದೆ, ರಾಜ್ಯಪಾಲರು ವಿವೇಚನಾರಹಿತ ವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಸಾಂವಿಧಾನಿಕ ಕಚೇರಿ (ರಾಜ್ಯಪಾಲರ) ದುರ್ಬಳಕೆ ಆಗಿದೆ’ ಎಂಬುದನ್ನು ದಾಖಲಿಸಲಾಗಿದೆ