ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಕಂಟಕವಾಗಿ ಪರಿಣಮಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ 14 ಸೈಟು ಹಂಚಿಕೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೈಟು ಹಿಂಪಡೆಯುವಂತೆ ಕೋರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಆ 14 ನಿವೇಶನಗಳ ಖಾತೆಯನ್ನು ಮುಡಾ ರದ್ದುಗೊಳಿಸಿದೆ.
ಮುಖ್ಯಮಂತ್ರಿಯೂ ಆಗಿರುವ ತಮ್ಮ ಪತಿಯ ರಾಜಕೀಯ ಬದುಕನ್ನು ಕಟಕಟೆಯೆಲ್ಲಿ ತಂದು ನಿಲ್ಲಿಸಲು ಕಾರಣವಾಗಿರುವ ತಮ್ಮ ಹೆಸರಿನಲ್ಲಿರುವ ವಿವಾದಿತ 14 ನಿವೇಶನ ಹಿಂತಿರುಗಿಸುವ ಸಂಬಂಧ. ಪಾರ್ವತಿ ಮುಡಾಗೆ ಬರೆದಿದ್ದ ಪತ್ರ ಸೋಮವಾರ ಬಹಿರಂಗವಾಗಿತ್ತು ಬೆನ್ನಲ್ಲೇ ಅವರ ಪುತ್ರ, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಂಗಳವಾರ ಮುಡಾ ಕಚೇರಿಗೆ ತೆರಳಿ ಸೈಟ್ ಹಿಂಪಡೆಯುಂತೆ ಕೋರಿ ಪಾರ್ವತಿ ಅವರು ಬರೆದಿದ್ದ ಪತ್ರವನ್ನು ಮುಡಾ ಆಯುಕ್ತರಿಗೆ ಸಲ್ಲಿಸಿದರು.
ಅದರಂತೆ ಎಲ್ಲಾ 14 ನಿವೇಶನಗಳನ್ನು ಮುಡಾ ವಾಪಸ್ ಪಡೆದುಕೊಂಡು, ಪಾರ್ವತಿ ಅವರ ಹೆಸರಿನಲ್ಲಿದ್ದ ಕ್ರಯಪತ್ರ (ಸೇಲ್ ಡೀಡ್)ವನ್ನು ರದ್ದು ಮಾಡಿದೆ.
ಪಾರ್ವತಿ ಸಿದ್ದರಾಮಯ್ಯ ಅವರು ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಅದರಂತೆ ಕಾನೂನು ಸಲಹೆ ಪಡೆದು ನಾವು ಪಾರ್ವತಿ ಅವರ ಹೆಸರಿನಲ್ಲಿದ್ದ 14 ಸೈಟ್ ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ. ಈಗ ಮುಖ್ಯಮಂತ್ರಿ ಪತ್ನಿಗೆ ಹಂಚಿಕೆ ಮಾಡಲಾಗಿದ್ದ ಆ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದರು.