ಮೈಸೂರು : ದಾಖಲೆ ಕೇಳಿದರೂ ನೀಡದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ದಾಖಲೆ ಸಂಗ್ರಹಕ್ಕೆ ಮುಂದಾಗಿರುವ ಜಾರಿ ನಿರ್ದೇಶನಾಲಯ ಶನಿವಾರವೂ ಶೋಧ ಕಾರ್ಯಾಚರಣೆ ಮುಂದುವರಿಸಿತು. ಜಾರಿ ನಿರ್ದೇಶನಾಲಯದ ಈ ಕಾರ್ಯಾಚರಣೆ ಮುಡಾ ಸಿಬ್ಬಂದಿಗೆ ಉರುಳಾಗಲಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್ ಗೂ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ.
ಸಿಆರ್‌ಪಿಎಫ್ ಹಾಗೂ ಮೈಸೂರು ಪೊಲೀಸರ ಬಿಗಿ ಭದ್ರತೆಯಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ನಡೆಸಿರುವ 12ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮುಡಾ ಸೈಟ್ ಹಗರಣದ ಮೂಲ ದಾಖಲೆ ಸಂಗ್ರಹದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಮುಡಾದ ಹಲವು ಸಿಬ್ಬಂದಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಎರಡನೇ ದಿನವಾದ ಶನಿವಾರ ತನಿಖೆ, ಶೋಧ ಕಾರ್ಯವನ್ನು ಚುರುಕುಗೊಳಿಸಿರುವ ಇಡಿ ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮುಡಾ ಕಚೇರಿಯಲ್ಲೇ ವಾಸ್ತವ್ಯ:
ಶುಕ್ರವಾರ ತಡರಾತ್ರಿವರೆಗೂ ಶೋಧ ನಡೆಸಿದ ಇಡಿ ಅಧಿಕಾರಿಗಳಿಗೆ ಪ್ರಕರಣದ ಮೂಲ ದಾಖಲೆ ಸಿಕ್ಕಿರಲಿಲ್ಲ. ತನಿಖೆಯನ್ನು ಮುಂದುವರಿಸುವ ದೃಷ್ಟಿಯಿಂದ ಇಡಿ ಅಧಿಕಾರಿಗಳು ಮುಡಾ ಕಚೇರಿಗೆ ದಿಂಬು, ಹಾಸಿಗೆ ತರಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದರು.
ಶನಿವಾರ ಬೆಳಗ್ಗೆ ತನಿಖೆ ಆರಂಭಿಸಿದ ಇಡಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಸೇರಿದ ನಿವೇಶನದ ಮೂಲ ದಾಖಲೆಗಳು ಇ ಡಿ ವಶವಾಗಿವೆ. ಮೊದಲ ದಿನದ ಇಡಿ ಅಧಿಕಾರಿಗಳ ಡ್ರಿಲ್‌ಗೆ ಬೆಚ್ಚಿ ಬಿದ್ದ ಮುಡಾ ಅಧಿಕಾರಿಗಳು, ಎರಡನೇ ದಿನ ವೈಟ್ನರ್ ಹಾಕಿಲ್ಲದೆ ಇದ್ದ ದಾಖಲೆಗಳನ್ನು ಇಡಿ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಇದರಿಂದಾಗಿ ಸಿಎಂ ಸಿದ್ದರಾಮಯ್ಯರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.