ಬೆಂಗಳೂರು : ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ತನಿಖೆಯ ಭಾಗವಾಗಿ ಹಲವೆಡೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಮಂಗಳವಾರ ಏಕಾಏಕಿ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಮುಡಾ ತನಿಖೆ ಇನ್ನೊಂದು ಮಜಲು ಪಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಿರುವುದು ನಟೇಶ್ ಅವಧಿಯಲ್ಲೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ನಟೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಟೇಶ್ ಹೇಳಿಕೆ ಮೇಲೆ ಸಿಎಂ ಭವಿಷ್ಯ :
ವಿಚಾರಣೆ ವೇಳೆ ನಟೇಶ್, ಸಿದ್ದರಾಮಯ್ಯ ಪ್ರಭಾವಕ್ಕೊಳಗಾಗಿ ಪಾರ್ವತಿ ಅವರಿಗೆ ಮುಡಾ ನಿವೇಶನ ಹಂಚಿಕೆ ಮಾಡಿರುವುದಾಗಿ ಒಪ್ಪಿಕೊಂಡರೆ ಆಗ ಇಡಿ ತನಿಖೆ ನೇರವಾಗಿ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಳ್ಳುವ ಸಾಧ್ಯತೆಯಿದೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ನಟೇಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಬರೊಬ್ಬರಿ 33 ಗಂಟೆ ಕಾಲ ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು, ಎಲ್ಲಾ ದಾಖಲೆಗಳನ್ನು ಮಂಗಳವಾರದವರೆಗೂ ಸೂಕ್ತವಾಗಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ನಡೆದ ಸುಳಿವು ಹಾಗೂ ಕೆಲ ಗೊಂದಲಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಂಜೆ ವೇಳೆ ನೇರವಾಗಿ ಮತ್ತೊಮ್ಮೆ ಮಲ್ಲೇಶ್ವರದಲ್ಲಿದ್ದ ನಟೇಶ್ ಮನೆಗೆ ದಾಳಿಯಿಟ್ಟ ಇಡಿ ಅಧಿಕಾರಿಗಳು, ಅವರನ್ನು ವಶಕ್ಕೆ ಪಡೆದು ಶಾಂತಿ ನಗರದ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ