ಹೊಸದಿಲ್ಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಮುಡಾ ಹಗರಣ ಸಂಬಂಧ 300 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ಒಟ್ಟು 140ಕ್ಕೂ ಹೆಚ್ಚು ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಶುಕ್ರವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ಜಪ್ತಿ ನಡೆದಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟರಾಗಿ ಕೆಲಸ ಮಾಡುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ ಎಂದು ಇಡಿ ಹೇಳಿಕೆ ಹೊರಡಿಸಿದೆ.
ಮುಡಾ ಸ್ವಾಧೀನಪಡಿಸಿಕೊಂಡ 3 ಎಕರೆ 16 ಗುಂಟೆ ಭೂಮಿಗೆ ಬದಲಾಗಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ. ತಮ್ಮ ಪತ್ನಿ ಬಿ.ಎಂ. ಪಾರ್ವತಿ ಅವರ ಹೆಸರಿನಲ್ಲಿ 14 ನಿವೇಶನಗಳಿಗೆ ಪರಿಹಾರ ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಭೂಮಿ ಯನ್ನು ಮುಡಾ 3,24,700 ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಬದಲಿಯಾಗಿ 14 ನಿವೇಶನಗಳನ್ನು ನೀಡಿರುವ ಪ್ರದೇಶದಲ್ಲಿ ಪರಿಹಾರವು 56 ಕೋಟಿ ರೂ.ಗಳ ಮೌಲ್ಯದ್ದಾಗಿದೆ ಎಂದು ಸಂಸ್ಥೆ ತಿಳಿಸಿದೆ.