ಮೈಸೂರು : ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಬಿರು ಗಾಳಿ ಎಬ್ಬಿಸಿದ್ದ ಮೈಸೂರು ‘ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸಿದ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಮತ್ತು ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿಎಂ, 2ನೇ ಆರೋಪಿ ಸಿಎಂ ಪತ್ನಿ ಪಾರ್ವತಿ, 3ನೇ ಆರೋಪಿ ಭಾಮೈದ ಮಲ್ಲಿ ಕಾರ್ಜುನಸ್ವಾಮಿ ಮತ್ತು 4ನೇ ಆರೋಪಿ ಭೂಮಿಮಾರಾಟಮಾಡಿದ್ದ ಜೆ. ದೇವರಾಜು ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ಲೋ ಕಾಯುಕ್ತ ಎಸ್ಪಿ ಟಿ.ಜೆ. ಉದೇಶ ದೂರುದಾರ ಸ್ನೇಹಮಯಿ ಕೃಷ್ಣರಿಗೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಅಂತಿಮ ತನಿಖಾ ವರದಿಯನ್ನು ಲೋಕಾಯುಕ್ತ ಪೊಲೀಸರು ಗುರುವಾರ ಕೋರ್ಟ್ ಸಲ್ಲಿಸಲಿದ್ದಾರೆ.
ಈ ಕುರಿತು ಸ್ನೇಹಮಯಿ ಕೃಷ್ಣ ಮಾತ ನಾಡಿ, ಲೋಕಾಯುಕ್ತ ನೋಟಿಸ್ ನಿರೀಕ್ಷಿತ. ಈ ಪ್ರಕರಣದಲ್ಲಿ ಸ್ವತಃ ಸಿಎಂ ಎ1 ಆರೋಪಿ ಯಾಗಿರುವುದರಿಂದ ಸರ್ಕಾರಿ ಅಧಿಕಾರಿ ಅವರ ರಕ್ಷಣೆಗೆ ಮುಂದಾಗಿರುವುದು ಸಾಬೀತಾಗಿದೆ. ಲೋಕಾಯುಕ್ತ ಅಧಿಕಾರಿಗಳು ಆತ್ಮಸಾಕ್ಷಿಗೆ ವಿರುದ್ಧವಾಗಿ ಭ್ರಷ್ಟರ ರಕ್ಷಣೆಗೆ ಮುಂದಾಗಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದವು. ಕೊನೆಗೆ ಸಿಎಂ ಮುಡಾದಿಂದ ಪಡೆದಿದ್ದ 14 ಸೈಟು ಮರಳಿಸಿ ಪ್ರಕರಣದಿಂದ ಹೊರಬರುವ ಪ್ರಯತ್ನ ಮಾಡಿದ್ದರು.

