ಬೆಂಗಳೂರು : ತೀವ್ರ ರಾಜಕೀಯ ವಾಗ್ವಾದ, ಪ್ರತಿಭಟನೆ, ಹಲವು ರೀತಿಯ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದ್ದ ಮುಡಾ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಪೂರ್ವಾ ನುಮತಿ ರದ್ದು ಪಡಿಸಲು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ತಕರಾರು ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಇಂದು ಮಂಗಳವಾರ ಪ್ರಕಟಿಸಲಿದೆ.
ಮುಖ್ಯಮಂತ್ರಿಗಳ ಅರ್ಜಿ ಕುರಿತು ಘಟಾನುಘಟಿ ಹಿರಿಯ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಪ್ರಕಟಿಸಲಿದೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿರುವ ಮುಡಾ ಪ್ರಕರಣ ಮತ್ತು ಮುಖ್ಯಮಂತ್ರಿಗಳನ್ನು ಕಾಡುತ್ತಿರುವ ಪ್ರಾಸಿಕ್ಯೂಷನ್ ಭೀತಿಯ ಭವಿಷ್ಯ ನಿರ್ಧಾರವಾಗಲಿದೆ. ಇಡೀ ದೇಶ ರಾಜಕಾರಣದ ಗಮನ ಈಗ ಹೈಕೋರ್ಟ್‌ನತ್ತ ನೆಟ್ಟಿದೆ. ಮುಖ್ಯಮಂತ್ರಿಗಳ ಅರ್ಜಿ ವಜಾಗೊಂಡರೆ ಅಥವಾ ಪುರಸ್ಕಾರವಾದರೆ ಮುಂದೇನಾಗಬಹುದು ಎಂಬ ಚರ್ಚೆ ಹಾಗೂ ಲೆಕ್ಕಾಚಾರಗಳು ಶುರುವಾಗಿದೆ.