ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ 14 ನಿವೇಶನಗಳನ್ನು ಮಂಜೂರು ಮಾಡಿರುವ ಪ್ರಕರಣಕ್ಕೆ ಮುಡಾದ ಹಿಂದಿನ ಆಯುಕ್ತ ಡಿಬಿ ನಟೇಶ್ ಅವರನ್ನು ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ನೋಟಿಸ್ ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದ ಬ್ಯಾಗ್‌ನೊಂದಿಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ ನಟೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಲೋಕಾಯುಕ್ತ ಎಸ್ಪಿ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ನಟೇಶ್ ಸಂಬಂಧಿಸಿದ ಕೆಲವು ದಾಖಲೆಗಳನ್ನು ನೀಡಿದರು.
ಮಧ್ಯಾಹ್ನ ಊಟದ ಬಿಡುವಿನ ಹಿನ್ನಲೆಯಲ್ಲಿ ಕಚೇರಿಯಿಂದ ಹೊರ ಬಂದ ನಟೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ವಿಚಾರಣೆ ಜಾರಿಯಲ್ಲಿರುವುದರಿಂದ ಏನನ್ನೂ ಹೇಳಲಾಗದು ಸಿಎಂ ಸಿದ್ದರಾಮಯ್ಯನವರ ಪತ್ನಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಸೈಟು ಅಲಾಟ್ ಆಗಿರೋದು ನಿಜ, ಕಾಯ್ದೆ ಮತ್ತು ನಿಯಮಾವಳಿಗಳ ಬಗ್ಗೆ ಅಧಿಕಾರಿಗಳ ದೃಷ್ಟಿಕೋನ ಭಿನ್ನವಾಗಿರುತ್ತದೆ ಎಂದು ಹೇಳಿದರು.