ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಒಂದು ಹಂತದ ತನಿಖೆಯನ್ನು ಪೂರ್ಣ ಗೊಳಿಸಿದ್ದು 700 ಕೋಟಿ ರೂ. ಮೌಲ್ಯದ ಹಗರಣ ನಡೆದಿರುವ ಬಗ್ಗೆ ಹಲವಾರು ಪುರಾವೆ ನೀಡಿದೆ. ಮುಡಾ ಒಟ್ಟು 1,095 ಸೈಟ್‌ಗಳನ್ನು ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಕಾನೂನುಬಾಹಿರವಾಗಿ ಹಂಚಿಕೆ ಮಾಡಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, 14 ನಿವೇಶನವನ್ನು ಪಾರ್ವತಿ ಅವರಿಗೆ ಮಂಜೂರು ಮಾಡುವ ವೇಳೆ ಶಾಸನಬದ್ದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಅಲ್ಲದೇ ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ, ಅನಾವಶ್ಯಕ ಒಲವು ಮತ್ತು ಅಧಿಕಾರದ ಪ್ರಭಾವದ ಬಳಕೆ ಮತ್ತು ನಕಲಿ ಸಹಿಗಳ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ.
ಸಿದ್ದರಾಮಯ್ಯ ಆಪ್ತನ ಪ್ರಭಾವ :
ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್.ಜಿ. ದಿನೇಶ್ ಕುಮಾರ್ ಮುಡಾ ನಿವೇಶನ ಹಂಚಿಕೆ ವೇಳೆ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ದಿನೇಶ್ ನಕಲಿ ಸಹಿ ಮಾಡುವ ಮೂಲಕ ಪ್ರಭಾವ ಬೀರಿದ್ದರು ಎಂದು ಇಡಿ ತನಿಖೆ ವೇಳೆ ಗೊತ್ತಾಗಿದೆ.
ಅಲ್ಲದೇ ಮುಡಾದ ಅಕ್ರಮ ಚಟುವಟಿಕೆಗಳು ಸಿಎಂ ಪತ್ನಿ ಪಾರ್ವತಿ ಅವರಿಗೆ ಮಾತ್ರ ಸೀಮಿತವಾಗಿರದೇ 700 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ನಿವೇಶನ ಹಂಚಿಕೆ ವೇಳೆಯೂ ಅವ್ಯವಹಾರ ನಡೆದಿದೆ ಎಂದು ಇಡಿ ತನಿಖೆ ಬಹಿರಂಗಪಡಿಸಿದೆ. ಈ ಅಕ್ರಮ ಹಂಚಿಕೆಯ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.