ಬೆಂಗಳೂರು : ಖ್ಯಾತ ಚಿತ್ರನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಅನೇಕ ಮೌಖಿಕ ಸಾಕ್ಷ್ಯಗಳು, ಸಾಂದರ್ಭಿಕ ಸಾಕ್ಷ್ಯಗಳು, ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದರು. ಸಂಗ್ರಹಿಸಿರುವ ಈ ಸಾಕ್ಷ್ಯಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಹೈದರಾಬಾದ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಪೈಕಿ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಕೈ ಸೇರಿವೆ. ಹೈದರಾಬಾದ್ನ ಪ್ರಯೋಗಾಲಯದ ವರದಿಗಳು ಶೀಘ್ರದಲ್ಲೇ ಕೈಸೇರಲಿವೆ. ಅಂದರೆ, ಶೇ.70ರಷ್ಟು ವರದಿಗಳು ಬಂದಿವೆ. ಉಳಿದ ಶೇ.30ರಷ್ಟು ವರದಿಗಳು ಬರುವುದು ಬಾಕಿ ಇದೆ ಎಂದು ಹೇಳಿದರು.