ನಾಗಮಂಗಲ : ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ಬುಧವಾರ ರಾತ್ರಿ ನಡೆದ ಗಲಭೆಯಲ್ಲಿ 20ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದ್ದು, 6 ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. 8 ಬೈಕ್‌ಗಳು ಬೆಂಕಿಗಾಹುತಿಯಾಗಿದ್ದು, 25 ಕೋಟಿ ರು.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ಅನ್ಯಕೋಮಿನ ಯುವಕರು, ನಂತರ ಪೆಟ್ರೋಲ್ ಬಾಂಬ್ ತೂರಿ ಅಂಗಡಿ, ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ಸಿಕ್ಕ ಸಿಕ್ಕ ಕಾರು, ಬೈಕ್‌ಗಳನ್ನು ಪುಡಿ ಮಾಡಿದರು . ಕಿಡಿಗೇಡಿಗಳ ಕೃತ್ಯಕ್ಕೆ ನಾಗಮಂಗಲ ಹೊತ್ತಿ ಉರಿಯಿತು. ಪರಿಸ್ಥಿತಿ ಶಾಂತಗೊಂಡ ಬಳಿಕವೂ ಒಂದರ ಬಳಿಕ ಮತ್ತೊಂದು ಅಂಗಡಿಗೆ ಬೆಂಕಿ ಹಚ್ಚಲಾಯಿತು.
ಗಲಭೆ ವೇಳೆ, ಪಟ್ಟಣದ ಸಾಧನ ಟೆಕ್ಸ್ ಟೈಲ್ಸ್‌ನಲ್ಲಿದ್ದ 2 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆಗಳು, ಮುಜೀಬ್ ಎಂಬುವರ ಮಾಲಿಕತ್ವದ ಪಾತ್ರೆ ಅಂಗಡಿಯಲ್ಲಿ 25 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ, ಶ್ರೀನಿವಾಸ ಹಾರ್ಡ್‌ವೇರ್‌ಮತ್ತು ಜಯರಾಮೇಗೌಡ ಸಬ್ ಮರ್ಸಿಬಲ್ಸ್‌ನಲ್ಲಿದ್ದ ಲಕ್ಷಾಂತರ ರು. ಮೌಲ್ಯದ ಪಂಪ್, ಮೋಟಾರ್‌ಗಳು,ಪಾತ್ರೆ, ಹಣ್ಣು, ಚಪ್ಪಲಿ ಮತ್ತು ಅಲಂಕಾರಿಕ ವಸ್ತುಗಳಿದ್ದ ಅಂಗಡಿಗಳು, ಕಾಫಿ-ಟೀ ಅಂಗಡಿಗಳು, ಗ್ಯಾರೇಜ್, ಪಂಚರ್ ಶಾಪ್ ಸೇರಿ 20ಕ್ಕೂ ಹೆಚ್ಚು ಅಂಗಡಿಗಳು ಹಾಗೂ ರಸ್ತೆ ಬದಿ ನಿಲ್ಲಿಸಿದ್ದ 8 ಬೈಕ್‌ಗಳು ಸುಟ್ಟು ಭಸ್ಮವಾಗಿವೆ. 6 ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ಜ್ವಾಲೆಗೆ ಪಟ್ಟಣದ ರಸ್ತೆಗಳು ಕಪ್ಪಾಗಿ ಹೋಗಿವೆ.ಮೈಸೂರು ರಸ್ತೆಯಲ್ಲಿರುವ ಬಜಾಜ್ ಶೋರೂಂನ ಮುಂಭಾಗ ಅಳವಡಿಸಿದ್ದ ದೊಡ್ಡ, ದೊಡ್ಡ ಗಾಜುಗಳನ್ನು ಧ್ವಂಸಗೊ ಳಿಸಿ, ಸಿಸಿ ಕ್ಯಾಮರಾ ನಾಶಪಡಿಸಲಾಗಿದೆ. ಮಾರಾಟಕ್ಕಿಟ್ಟಿದ್ದ ಲಕ್ಷಾಂತರ ರು. ಮೌಲ್ಯದ 8 ಹೊಸ ಬೈಕ್‌ಗಳನ್ನು ಕದ್ದೊಯ್ಯಲಾಗಿದೆ. ಅಲ್ಲದೆ, ಶೋಂ ರೂಂನಲ್ಲೇ ಒಂದು ಬೈಕ್ ಅನ್ನು ಜಖಂಗೊಳಿಸಲಾಗಿದೆ.
ಬೇಕರಿಗಳಲ್ಲಿ ಲೂಟಿ ! ಬೇಕರಿ, ದಿನಸಿ ಸೇರಿ ಹಲವು ಅಂಗಡಿ ಮುಂಗಟ್ಟುಗಳ ಬಾಗಿಲುಗಳು ಕಿಡಿಗೇಡಿಗಳು ನಡೆಸಿದ ದಾಂಧಲೆಯಿಂದ ಜಖಂಗೊಂಡಿವೆ. ಬುಧವಾರ ತಡರಾತ್ರಿ 12 ಗಂಟೆವರೆಗೂ ಪಟ್ಟಣ ದಲ್ಲಿ ಬೆಂಕಿ ಹೊತ್ತಿ ಉರಿಯಿತು. ಸ್ಥಳಕ್ಕಾ ಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಪೊಲೀಸರು ಇಡೀ ರಾತ್ರಿ ಪಟ್ಟಣ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ಗಸ್ತು ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು 46 ಜನರನ್ನು ಬಂಧಿಸಿದ್ದಾರೆ