ಬೆಂಗಳೂರು : ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ನಡೆದಿದ್ದ ಹಳೇಹುಬ್ಬಳ್ಳಿ ಗಲಭೆ ಪ್ರಕರಣದ ಸಂಬಂಧ ದಾಖಲಿಸಿದ್ದ 40ಕ್ಕೂ ಹೆಚ್ಚು ಕೇಸುಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಇದೀಗ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ
ಈ ಗಲಭೆಗೆ ಸಂಬಂಧಿಸಿ ಬಿಜೆಪಿ ಸುಳ್ಳು ಪ್ರಕರಣ ದಾಖಲಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮತ್ತಿತರ ಕಾಂಗ್ರೆಸ್ ನಾಯಕರು ಆರೋಪಿಸಿದರೆ, ಎನ್‌ಐಎ ತನಿಖೆ ನಡೆಯುತ್ತಿರುವಾಗಲೇ ಕೇಸ್ ಹಿಂಪಡೆಯಲು ಮುಂದಾಗಿರುವುದು ತುಷ್ಟಿಕರಣದ ರಾಜಕಾರಣ, ಇದರ ಹಿಂದೆ ಮತ ಬ್ಯಾಂಕ್‌ನ ದುರುದ್ದೇಶ ಅಡಗಿದೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಪ್ರತಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಸುಳ್ಳು ಪ್ರಕರಣ:
ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸಂಪುಟ ಉಪಸಮಿತಿ ಪರಿಶೀಲಿಸಿ ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿ ಸಚಿವ ಸಂಪುಟದ ಮುಂದೆ ಬಂದಿದ್ದು, ಅದನ್ನು ನಾವೆಲ್ಲರೂ ಒಪ್ಪಿದ್ದೇವೆ. ಕೋರ್ಟ್ ಅನುಮತಿ ನೀಡಿದರೆ ಪ್ರಕರಣ ಹಿಂಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಇದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಸಮರ್ಥಿಸಿಕೊಂಡಿದ್ದಾರೆ