ಬೆಂಗಳೂರು : ರಾಜ್ಯದ ಜನರಿಗೆ ಶೇ.40 ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.100 ಭ್ರಷ್ಟರಾಗಿದ್ದು ಕಮಿಷನ್ ಆರೋಪ ಕಾಂಗ್ರೆಸ್ಸಿನ ಟೂಲ್ ಕಿಟ್ ಎಂಬುದು ಈಗ ಸಾಕ್ಷಿ ಸಮೇತ ರುಜುವಾತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ.
ಭಾನುವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 18 ತಿಂಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಿನನಿತ್ಯ ಒಬ್ಬರಲ್ಲ ಒಬ್ಬ ಮಂತ್ರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ ಶೇ.40 ಕಮಿಷನ್ ಆರೋಪಗಳು ಶುದ್ಧ ಸುಳ್ಳೆಂದು ಲೋಕಾಯುಕ್ತ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ. ಶೇ.40 ಕಮಿಷನ್ ಆರೋಪ ಕಾಂಗ್ರೆಸ್ಸಿನ ಟೂಲ್ ಕಿಟ್ ಎಂಬುದು ಈಗ ಸಾಕ್ಷಿ ಸಮೇತ ರುಜುವಾತಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಗುತ್ತಿಗೆ ಕೆಲಸಗಳನ್ನು ಮಾಡುವುದನ್ನು ಬಿಟ್ಟೇ ಆರು ವರ್ಷವಾಗಿತ್ತು. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಕಟ್ಟಿದ ಸುಳ್ಳಿನ ಮಹಲು ಸಂಪೂರ್ಣ ಕುಸಿದುಬಿದ್ದಿದೆ ಎಂದರು.
ಸಿದ್ದರಾಮಯ್ಯ ತಮ್ಮ 40 ವರ್ಷದ ಜೀವನ ತೆರೆದ ಪುಸ್ತಕ ಅಂದವರು. ಅವರ ತೆರೆದ ಪುಸ್ತಕ ಪುಟಗಳನ್ನು ತಿರುವಿದರೆ ಲೂಟಿಯ ಕಪ್ಪು ಚುಕ್ಕೆಗಳೇ ಕಾಣುತ್ತಿವೆ. ಸಿಎಂ ತಾವೇ ನೇಮಕ ಮಾಡಿರುವ ಪೊಲೀಸರಿಂದ ವಿಚಾರಣೆ ಎದುರಿಸುತಿರುವುದು ಕನ್ನಡಿಗರ ದುರ್ದೈವ ಎಂದರು.