ಬೆಂಗಳೂರು : ಕೊರೋನಾ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪಿಪಿಇ ಕಿಟ್‌ಗಳ ಖರೀದಿಯಲ್ಲಿ 14.21 ಕೋಟಿ ರು. ಭ್ರಷ್ಟಾಚಾರ ಎಸಗಿರುವುದರಿಂದ ಅವರ ವಿರುದ್ದ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಆಯೋಗ ಶಿಫಾರಸು ಮಾಡಿದೆ.
ಆ ಬೆನ್ನಲ್ಲೇ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೆ ಅಗತ್ಯ ಸಿದ್ದತೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಕೊರೋನಾ ವೇಳೆ ಸ್ಥಳೀಯ ಕಂಪನಿಗಳಲ್ಲಿ 330 ರಿಂದ 400 ರು.ಗೆ ಪಿಪಿಇ ಕಿಟ್ಗಳು ಲಭ್ಯವಿದ್ದರೂ, ಅಧಿಕಾರಿಗಳ ಸಲಹೆ ನಿರ್ಲಕ್ಷ್ಯ ಮಾಡಿ 5 ಪಟ್ಟು ದುಬಾರಿ (ಪ್ರತಿ ಕಿಟ್‌ಗೆ 2,117 ರು.) ಪಾವತಿಸಿ ಚೀನಾದ ಕಂಪನಿಗಳಿಂದ 3 ಲಕ್ಷ ಕಿಟ್ ಖರೀದಿಸಲಾಗಿತ್ತು. ಜತೆಗೆ ಹೆಚ್ಚುವರಿಯಾಗಿ ಆಮದು ಮತ್ತು ಸಾಗಣೆ ವೆಚ್ಚ ನೀಡಿ ಕಂಪನಿಗಳಿಗೆ ಲಾಭ ಮಾಡಿ ಕೊಡಲಾಗಿತ್ತು. ತನ್ಮೂಲಕ 14.21 ಕೋಟಿ ರು. ಗಳ ಭ್ರಷ್ಟಾಚಾರ ಎಸಗಿರುವ ಹಿನ್ನೆಲೆಯಲ್ಲಿ ‘ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ಮೈಕಲ್ ಕುನ್ಹಾ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.