ಬೆಳಗಾವಿ : ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕಲ್ಲು ತೂರಾಟ ಹಾಗೂ ಲಾಠಿ ಪ್ರಹಾರದಿಂದ ಹಲವಾರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸುವರ್ಣ ವಿಧಾನಸೌಧದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಿತು.
ಕೊಂಡೊಸಕೊಪ್ಪ ಗ್ರಾಮದಲ್ಲಿ ಮುಂಜಾನೆಯಿಂದ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದ್ದ ಸಾವಿರಾರು ಪಂಚಮಸಾಲಿ ಸಮುದಾಯದವರು, ಮಧ್ಯಾಹ್ನದ ಹೊತ್ತಿಗೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಪೊಲೀಸರೊಂದಿಗೆ ಘರ್ಷಣೆಗಿಳಿದರು. ಪೊಲೀಸರ ಸರ್ಪಗಾವಲನ್ನು ಭೇದಿಸಲು ಯತ್ನಿಸಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ನೂಕಾಟ, ತಳ್ಳಾಟದೊಂದಿಗೆ ಬ್ಯಾರಿಕೇಡ್ ತಳ್ಳುವ ಮೂಲಕ ಹೆದ್ದಾರಿಗೆ ನುಗ್ಗಿದರು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಕೊಂಡನಕೊಪ್ಪ ಕ್ರಾಸ್ ಬಳಿ ನೇರವಾಗಿ ಹೆದ್ದಾರಿಗೆ ಬಂದು ಪ್ರತಿಭಟನೆ ನಡೆಸಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರಲ್ಲದೇ, ಸುವರ್ಣವಿಧಾನಸೌಧದತ್ತ ನುಗ್ಗಲೆತ್ನಿಸಿದರು.ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿದಾಗ ಸುವರ್ಣ ವಿಧಾನಸೌಧ ಎದುರಿನ ಷಟ್ಪಥ ರಸ್ತೆ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತು
ರಾಷ್ಟ್ರೀಯ ಹೆದ್ದಾರಿ ಅಲ್ಲದೇ, ಸರ್ವಿಸ್ ರಸ್ತೆಯ ಮೂಲಕವೂ ‘ನುಗ್ಗಲು ಯತ್ನಿಸಿದ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಲಾಯಿತು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸತೊಡಗಿದರು ಹೀಗಾಗಿ ಪೊಲೀಸರು ಬೆನ್ನಟ್ಟಿ ಮತ್ತೆ ಲಾಠಿ ಬೀಸಿ ಅವರನ್ನು ಅಲ್ಲಿಂದ ಚದುರಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಗೊಂದಲ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವೃದ್ಧರು, ವಕೀಲರು ಎನ್ನದೇ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರಿಂದ ಹಲವರು ತೀವ್ರವಾಗಿ ಗಾಯಗೊಂಡರು
ಲಾಠಿ ಹಿಡಿದ ಹಿರಿಯ ಅಧಿಕಾರಿಗಳು :
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದಾಗ ಎಡಿಜಿಪಿ ಹಿತೇಂದ್ರ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸ್ವತಃ ಕೈಯಲ್ಲಿ ಲಾಠಿ ಹಿಡಿದು ಕಲ್ಲು ತೂರಾಟ ನಡೆಸಿದ ಹೋರಾಟಗಾರರನ್ನು ಚದುರಿಸಿದ್ದಾರೆ