ಬೆಂಗಳೂರು : ಆರೋಪ ಪ್ರತ್ಯಾರೋಪಗಳಿಂದ ಜಗಮಗಿಸಿದ್ದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪಚುನಾವಣಾ ಪ್ರಚಾರ ಇಂದು ಸಂಜೆ 6 ಗಂಟೆಗೆ ತೆರೆಬಿದ್ದಿದೆ ಬಹಿರಂಗ ಪ್ರಚಾರ ಕೊನೆಗೊಳ್ಳುವುದರ ಜತೆಗೆ ಕೋಲಾಹಲ ಸೃಷ್ಟಿಸುವಂತಹ ಹೇಳಿಕೆಗಳಿಗೂ ತೆರೆ ಬಿದ್ದಿದೆ
ಮತದಾರರ ಮತ ಗೆಲ್ಲಲು ಇಷ್ಟು ದಿನಗಳ ಕಾಲ ಪ್ರಚಾರ ನಡೆಸಿದ ನಾಯಕರು, ಇಂದು ಸಂಜೆ ಕ್ಷೇತ್ರ ಬಿಟ್ಟು ತೆರಳೀದ್ದಾರೆ. 3 ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ಮುಗಿದಿದ್ದು ಇನ್ನೇನಿದ್ದರೂ ಕಾರ್ಯಕರ್ತರು ಮನೆ ಮನೆ ಪ್ರಚಾರದ ಮೂಲಕ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಬೇಕಿದೆ
ಮೂರು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ನಾಯಕರು ಬೃಹತ್ ಪ್ರಚಾರ ನಡೆಸಿದ್ದು, ಕಳೆದ 10 ದಿನಗಳಿಂದ ನಾಯಕರ ದಂಡು ಕ್ಷೇತ್ರಗಳಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದಾರೆ. ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದಾರೆ.