ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿ ಮತ್ತು ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ಸಹಯೋಗದೊಂದಿಗೆ ಅ.24ರಿಂದ 26ರ ವರೆಗೆ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅವರು, ಉಡುಪಿಯಲ್ಲಿ ಈ 51ನೇ ಸಮ್ಮೇಳನ ನಡೆಯುತ್ತಿದ್ದು, ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದೆ ಎಂದರು.
ಸಮ್ಮೇಳನದಲ್ಲಿ ಪತಂಜಲಿ ಯೋಗ ಗುರು ಬಾಬಾ ರಾಮದೇವ್, ಪೇಜಾವರ, ಸುಬ್ರಹ್ಮಣ್ಯ, ಮಂತ್ರಾಲಯ, ಭಂಡಾರಕೇರಿ ಮಠಾಧೀಶರ ಸಹಿತ ವಿವಿಧ ಮಠಮಾನ್ಯರು, ವಿದ್ವಾಂಸರು ಭಾಗವಹಿಸುವರು. ದೇಶದ 18 ವಿಶ್ವವಿದ್ಯಾನಿಲಯಗಳ ಕುಲಪತಿಗಳು ಸಮ್ಮೇಳನದಲ್ಲಿ ಉಪಸ್ಥಿತರಿರುವರು. ಕೃಷ್ಣಮಠ ರಾಜಾಂಗಣ, ಸಂಸ್ಕೃತ ಕಾಲೇಜು ಹಾಗೂ ಅಷ್ಟಮಠಗಳ ವಿವಿಧೆಡೆ ವಿವಿಧ ಗೋಷ್ಟಿಗಳು ನಡೆಯಲಿವೆ ‘ಎಂದು ಶ್ರೀಪಾದರು ವಿವರಿಸಿದರು..
ಸಮ್ಮೇಳನದಲ್ಲಿ ವೇದ, ಇರಾನಿಯನ್, ಇಸ್ಲಾಮಿಕ್, ಅರೇಬಿಕ್ ಮತ್ತು ಪರ್ಷಿಯನ್ ಅಧ್ಯಯನ, ಶಾಸ್ತ್ರೀಯ ಸಂಸ್ಕೃತ ಭಾಷೆ, ಪಾಲಿ ಮತ್ತು ಬೌದ್ಧ ಧರ್ಮ, ಪ್ರಾಕೃತ ಮತ್ತು ಜೈನ ಧರ್ಮ, ಇತಿಹಾಸ ಪುರಾತತ್ವ ಶಾಸ್ತ್ರ ಮತ್ತು ತಾಳೆಗರಿ ಲಿಪಿ ಶಾಸ್ತ್ರ, ದ್ರಾವಿಡ ಅಧ್ಯಯನ, ತತ್ವಜ್ಞಾನ ಮತ್ತು ಧರ್ಮ, ತಂತ್ರಜ್ಞಾನ ಮತ್ತು ಕಲೆ, ಕಂಪ್ಯೂಟರ್, ಏಷ್ಯನ್ ಅಧ್ಯಯನ, ಆಧುನಿಕ ಸಂಸ್ಕೃತ, ಪುರಾಣ ಮತ್ತು ಮಹಾಕಾವ್ಯ ಪರಂಪರೆ, ಭಾರತೀಯ ಸೌಂದರ್ಯ ಶಾಸ್ತ್ರ ಮತ್ತು ಕಾವ್ಯ ಭಾರತೀಯ ಜ್ಞಾನ ಪರಂಪರೆ, ಇಂಡೊಲಜಿ ಮರು ಅಧ್ಯಯನ, ಭಗವದ್ಗೀತೆ ಅಧ್ಯಯನ, ಯೋಗ, ಆಯುರ್ವೇದ, ವೈಷ್ಣವ ಭಕ್ತಿ ಪರಂಪರೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜನಪದ, ಬುಡಕಟ್ಟು ಸಂಸ್ಕೃತಿ ಅಧ್ಯಯನ, ಶಿಕ್ಷಣ ಮತ್ತು ಮಕ್ಕಳ ಸಾಹಿತ್ಯ ಇತ್ಯಾದಿ 23 ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮತ್ತು ಚಿಂತನೆ ವಿಮರ್ಶೆ ನಡೆಯಲಿದೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆ ಮತ್ತು ವಿಷಯಗಳಲ್ಲಿ ಸುಮಾರು 25 ಪ್ರಬಂಧ ಮಂಡನೆಯಾಗಲಿದೆ. ಸುಮಾರು 3 ಸಾವಿರ ಮಂದಿ ಭಾಗವಹಿಸುವರು. 25 ಪುಸ್ತಕಗಳ ಅನಾವರಣ ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅ.24ರಿಂದ ಮೂರು ದಿನಗಳ ಕಾಲ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ನೇತೃತ್ವದಲ್ಲಿ ಯೋಗ ಧ್ಯಾನ ತರಗತಿಗಳೂ ನಡೆಯಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿ.ವಿ. ಡೀನ್ ಪ್ರೊ. ಡಾ. ಶಿವಾನಿ, ಸಮ್ಮೇಳನ ಸಮಿತಿಯ ಡಾ. ಷಣ್ಮುಖ ಹೆಬ್ಬಾರ್, ಶ್ರುತಿ ರಾವ್, ಭಾಸ್ಕರ ಜೋಯಿಸ, ವೇದೇಶ ಆಚಾರ್ಯ ಮತ್ತು ಪ್ರಭಾಕರ ತುಮರಿ, ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯ ಇದ್ದರು.