ಮೈಸೂರು: ಪಾಕಿಸ್ತಾನ ಹಾಗೂ ಕೇರಳ ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಅದೇ ಮಾದರಿಯಲ್ಲಿ ರಾಜ್ಯವನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಗುರುವಾರ ಮೈಸೂರಿನ ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಏರ್ಪಡಿಸಿದ್ದ ಮೈತ್ರಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಕೆ.ಜಿ ಅಕ್ಕಿ ಬೆಲೆ 2 ಸಾವಿರ ಇದೆ. ಒಂದು ಟೀ ಕುಡಿಯಲು 500 ರೂ. ಕೊಡಬೇಕು. ಅಲ್ಲಿ ಅಗತ್ಯ ವಸ್ತುಗಳ ಬೆಲೆಗಳೆಲ್ಲಾ ಗಗನಕ್ಕೇರಿದೆ. ಅಲ್ಲಿನ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದು ಇದಕ್ಕೆ ಕಾರಣ. ಕೇರಳ ರಾಜ್ಯ ಕೂಡ ಆರ್ಥಿಕವಾಗಿ ದಿವಾಳಿಯಾಗಿದೆ. 2 ಲಕ್ಷ ರೂ. ಸಾಲ ಕೂಡ ಅದಕ್ಕೆ ಹುಟ್ಟುತ್ತಿಲ್ಲ. ಸಾಲ ಕೇಳಲು ಬಂದರೆ ಕೊಡವವರು ಓಡಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ನಿರ್ಮಿಸುತ್ತಿದೆ ಎಂದು ಕಿಡಿಕಾರಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲು ಪರಿಷತ್ ಚುನಾವಣೆ ಬಹಳ ಮುಖ್ಯವಾಗಿದೆ. ಪರಿಷತ್‌ನಲ್ಲಿ ಬಿಜೆಪಿ ಹಾಗೂ ಜಾ.ದಳ ಬಹುಮತ ಹೊಂದಿದೆ. ಬಿಜೆಪಿ ಅಭ್ಯರ್ಥಿಯೊಂದಿಗೆ ಮಾತನಾಡಿದ್ದೇನೆ. ಅವರು ತಮ್ಮ ನಾಮಪತ್ರ ಹಿಂಪಡೆ ಯುತ್ತಾರೆ. ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಹಾಗಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಎಲ್ಲರು ಶ್ರಮಿಸಬೇಕು ಎಂದು ತಿಳಿಸಿದರು.