ಬಳ್ಳಾರಿ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾಜಿ ಸಚಿವ ಮತ್ತು ಬಿಜೆಪಿ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿಗೆ 14 ವರ್ಷಗಳ ನಂತರ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ, ಜನಾರ್ದನ ರೆಡ್ಡಿಗೆ ಪೂರ್ವಾನುಮತಿ ಇಲ್ಲದೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಮತ್ತು ನಾಲ್ಕು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಜನಾರ್ದನ ರೆಡ್ಡಿಗೆ 2015ರಲ್ಲಿ ಜಾಮೀನು ದೊರೆತಿತ್ತು. ಆದರೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ, ಬಳ್ಳಾರಿಯಲ್ಲಿ ರೆಡ್ಡಿ ಬೆಂಬಲಿಗರು ಪಟಾಕಿ ಸಿಡಿಸಿ ಮತ್ತು ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದ್ದಾರೆ