ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಕೋರಿ ನಗರ ಪೊಲೀಸರು ಸೋಮವಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ ಇದೀಗ ಆರೋಪಿಗಳಿಗೆ ಜಾಮೀನು ರದ್ದು ಭೀತಿ ಎದುರಾಗಿದೆ.
ರಾಜ್ಯ ಸರ್ಕಾರದ ಪರವಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ನನ ಹಿರಿಯ ವಕೀಲರಾದ ಅನಿಲ್ ಸಿ.ನಿಶಾನಿ ಮತ್ತು ಸಿದ್ಧಾರ್ಥ್ ಲೂತ್ರಾ ಅವರು ಈ ಏಳು ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಪೂರಕ ದಾಖಲೆಗಳೊಂದಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಏಕೆ ಆರೋಪಿಗಳ ಜಾಮೀನು ರದ್ದು ಮಾಡಬೇಕು ಎಂಬುದಕ್ಕೆ ಕಾರಣ ಸಹಿತ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಹೈ ಕೋರ್ಟ್ ಆದೇಶ ರದ್ದುಗೊಳಿಸಿದರೆ, ಆರೋಪಿಗಳು ಮತ್ತೆ ಜೈಲು ಸೇರಬೇಕಾಗುತ್ತದೆ.