Home » ಪೊಲೀಸರ ಲಾಠಿ ಪ್ರಹಾರ ಪೂರ್ವನಿಯೋಜಿತ
 

ಪೊಲೀಸರ ಲಾಠಿ ಪ್ರಹಾರ ಪೂರ್ವನಿಯೋಜಿತ

ಬಸವಜಯ ಮೃತ್ಯುಂಜಯ ಶ್ರೀ ಆರೋಪ

by Kundapur Xpress
Spread the love

ಬೆಳಗಾವಿ : ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಮಂಗಳವಾರ ನಡೆದ ಪೊಲೀಸರ ಲಾಠಿ ಪ್ರಹಾರ ಪೂರ್ವನಿಯೋಜಿತ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಆರೋಪಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಸುವರ್ಣ ವಿಧಾನಸೌಧದ ಬಳಿಯ ಕೊಂಡಸಕೊಪ್ಪ ಗ್ರಾಮದಲ್ಲಿ ಶಾಂತಿಯುತ ಹೋರಾಟ ನಡೆಸಿದ್ದು ಮುಖ್ಯಮಂತ್ರಿಗಳು ಬಂದು ಮನವಿ ಸ್ವೀಕರಿಸಬೇಕೆಂದು ಹೇಳಿದರೂ ಅವರು ಬರಲಿಲ್ಲ. ಮಾತುಕತೆಗೆ ಯಾರನ್ನೂ ಆಹ್ವಾನಿಸಲಿಲ್ಲ. ಬದಲಾಗಿ ಪೊಲೀಸರ ಮೂಲಕ ಬಲಪ್ರಯೋಗ ಮಾಡಿಸಲಾಗಿದೆ ಎಂದು ದೂರಿದರು.

ಪೊಲೀಸರಿಂದಲೇ ಕಲ್ಲು ತೂರಾಟ:

ಪಂಚಮಸಾಲಿ ಸಮಾಜದ ಮುಖಂಡರು ಯಾರೂ ಕಲ್ಲು ಎಸೆದಿಲ್ಲ ಬದಲಾಗಿ ಪೊಲೀಸರು ಮಾರುವೇಷದಲ್ಲಿ ಬಂದು ಕಲ್ಲು ಎಸೆದು ಬಳಿಕ ಲಾಠಿ ಪ್ರಹಾರ ನಡೆಸಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಇದು ಪೊಲೀಸರ ಪೂರ್ವನಿಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ನಮ್ಮ ಸಮಾಜದ ಮುಖಂಡರ ಮೇಲೆ ಪೊಲೀಸರು ಇಷ್ಟೊಂದು ದೌರ್ಜನ್ಯ ಮಾಡುವುದು ಬೇಕಿರಲಿಲ್ಲ. ನಮ್ಮ ಸಮಾಜದ ಹೆಸರು ಕೆಡಿಸುವ ಕುತಂತ್ರ ಮಾಡಲಾಗಿದ್ದು ತಕ್ಷಣ ಸಮಾಜದ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

 

Related Articles

error: Content is protected !!