ಬಾಳೆಹೊನ್ನೂರು : ಇಲ್ಲಿನ ರಂಭಾಪುರಿ ಪೀಠಕ್ಕೆ ಸಿಯುಪಿಎ ಮತ್ತು ಪಿಇಟಿಎ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರು ಕೊಡುಗೆ ನೀಡಿರುವ ರೋಬೋಟಿಕ್ ಆನೆಯನ್ನು ರಂಭಾಪುರಿ ಹಾಗೂ ಕೇದಾರ ಜಗದ್ಗುರುಗಳು ಭಾನುವಾರ ಉದ್ಘಾಟಿಸಿದರು. ಆನೆಗಳನ್ನು ಸಾಕುವುದರಿಂದ ಅವುಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆಯಾಗುವ ಹಿನ್ನೆಲೆ ನಟಿ ಶಿಲ್ಪಾ ಶೆಟ್ಟಿ ಅವರು 8 ಲಕ್ಷ ವೆಚ್ಚದಲ್ಲಿ ನೀಡಿರುವ ಆನೆಯನ್ನು ಭಕ್ತರ ಸಮ್ಮುಖದಲ್ಲಿ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು. ನೋಡಲು ನಿಜವಾದ ಆನೆಯಂತೆ ಕಾಣುವ ರೋಬೋಟಿಕ್ ಆನೆ ಸದಾ ಕಿವಿ, ತಲೆ ಹಾಗೂ ಬಾಲ ಅಲುಗಾಡಿಸುತ್ತಿರುತ್ತದೆ. ಸೊಂಡಿಲನ್ನು ಎತ್ತಿ ಆಶೀರ್ವದಿಸುತ್ತದೆ. ನೋಡಿದ ಕೂಡಲೇ ನಿಜವಾದ ಆನೆ ಎಂದೇ ಭಾಸವಾಗುತ್ತದೆ. ರಂಭಾಪುರಿ ಪೀಠದ ಮುಂಭಾಗದಲ್ಲಿ ಇರಿಸಿರುವ ಈ ಆನೆ ಇದೀಗ ಭಕ್ತರ ಗಮನಸೆಳೆದಿದ್ದು ಸಚಿವ ಈಶ್ವರ್ಖಂಡ್ರೆ, ಕೆ.ಜೆ.ಜಾರ್ಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರು ಆನೆ ಜೊತೆಗೆ ಸೆಲ್ಪಿಗೆ ಮುಗಿಬಿದ್ದಿದ್ದರು.