ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿರುವಂತೆ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಲುಕಿಕೊಂಡಿದೆ. ಪೂರ್ಣ ತನಿಖೆಯಾದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ತಮ್ಮ ರಕ್ಷಣೆಗಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಯಾವುದೇ ತನಿಖೆ ನಡೆಸಿದರೂ ನಾವು ಎದುರಿಸಲು ಸಿದ್ಧರಿದ್ದೇವೆ. ಆದರೆ, ರಾಜಕೀಯ ದ್ವೇಷಕ್ಕಾಗಿ ಅಧಿಕಾರ ದುರುಪಯೋಗ ಆಗಬಾರದು ಎಂದರು.
ಎಪಿಎಂಸಿ ಸಂಬಂಧ ನನ್ನ ವಿರುದ್ಧ ಆರೋಪ ಮಾಡಲಾಗಿದೆ.ಆದರೆ ನಾನು ಎಪಿಎಂಸಿ ಸಚಿವನಾಗಿರಲಿಲ್ಲ. ಗೃಹ ಸಚಿವನಾಗಿದ್ದೆ. ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರು. ಜೊತೆಗೆ ಬಡ್ಡಿ ಸಮೇತ 52 ಕೋಟಿ ರು. ವಸೂಲಿ ಮಾಡಲಾಗಿತ್ತು. ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ. ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೆ ಹಂತಕ್ಕೆ ಬಂದಿದೆ. ನಮ್ಮ ವಿರುದ್ದ 40% ಆರೋಪ ಮಾಡಿದ್ದರು. ಇದುವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿಲ್ಲ. ರಾಜಕೀಯ ಉದ್ದೇಶದಿಂದ ಆಯೋಗ ಮಾಡಿದರೆ, ತನಿಖೆ ನಡೆಸಿದರೆ ಹೀಗೇ ಆಗುವುದು ಎಂದು ತಿರುಗೇಟು ನೀಡಿದರು.