ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ಮಂಡ್ಯ) : ಕನ್ನಡ ಭಾಷೆ ಉಳಿಯಬೇಕಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಿದ್ದು ಇದರ ಜತೆಗೆ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳು ಇವೆ. ಮಕ್ಕಳಿಗೆ ಮೆದುಳು, ಕರುಣೆ ಮತ್ತು ಕೌಶಲ್ಯ ವೂ ಇರುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ಈಗಿನ ಶಿಕ್ಷಣ ವ್ಯವಸ್ಥೆ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೇ ಬಾಯಿಪಾಠ ಮಾಡುವ, ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಕನ್ನಡ ಉಳಿಯಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಮಕ್ಕಳನ್ನು ಕನ್ನಡ ಶಾಲೆಗೆ ಸೆಳೆಯಬೇಕಿದೆ. ಆಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆಮಾಡುವ ಭಾಷೆಯಾಗಿ ಬೆಳೆಯುತ್ತದೆ ಎಂದರು
ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ. ಅನ್ಯ ಭಾಷಿಕರನ್ನು ಅವರದ್ದೇ ಭಾಷೆಯಲ್ಲಿ ಮಾತನಾಡಿಸದೆ ಅವರಿಗೆ ಕನ್ನಡ ಕಲಿಸುವ ಕಾರ್ಯ ಆಗಬೇಕು. ಈ ಸಮ್ಮೇಳನ ನಾಡಿನ ಸಮಸ್ಯೆಗೆ ಉತ್ತರ ಹಡುಕುವ ಸಮ್ಮೇಳನವಾಗಬೇಕು ಎಂದು ನುಡಿದರು