ಬಂಟ್ವಾಳ : ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಕೆ. ಫೆ.25ರಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಲಿದ್ದು, ಅಂದು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಆಶ್ರಯದಲ್ಲಿ ‘ಪ್ರಚಲಿತ ಭಾರತ: ಸತ್ಯ – ಮಿಥ್ಯ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯುವ ಸಮುದಾಯದ ಆಕರ್ಷಣೆಯಾಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ, ವಿದ್ಯಾಕೇಂದ್ರದ ಮಕ್ಕಳ ಚಟುವಟಿಕೆಯನ್ನು ವೀಕ್ಷಿಸಲಿದ್ದಾರೆ. ಬಳಿಕ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ‘ನನ್ನ ದೇಶ, ನನ್ನ ಹೊಣೆಗಾರಿಕೆ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂದರು.
ಬಳಿಕ ಎರಡನೇ ಅವಧಿಯಲ್ಲಿ ಬೆಂಗಳೂರಿನ ಇತಿಹಾಸ ಸಂಶೋಧಕ ಡಾ. ವಿಕ್ರಮ್ ಸಂಪತ್, ಕಲಿತ ಪಾಠಗಳು-ಅರಿಯದ ನೋಟಗಳು ಎಂబ ವಿಷಯವನ್ನು ಮಂಡಿಸಲಿದ್ದಾರೆ. 3ನೇ ಅವಧಿಯಲ್ಲಿ ಬೆಂಗಳೂರಿನ ನ್ಯಾಯವಾದಿ ಕ್ಷಮಾ ನರಗುಂದ ನರೇಟಿವ್ (ಕಥನ/ಅಖ್ಯಾನ) ಹಾಗೆಂದರೇನು?’ ಎಂಬ ವಿಷಯವನ್ನು ಮಂಡಿಸುವರು.
4ನೇ ಅವಧಿಯಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ, ‘ಇಸ್ರೇಲ್ – ನಾವರಿಯದ ಸತ್ಯಗಳು’ ಎಂಬ ವಿಷಯವನ್ನು ಮಡಿಸಲಿದ್ದಾರೆ. ಪ್ರತಿ ವಿಷಯ ಮಂಡನೆಯಾದ ಬಳಿಕ ಪ್ರಶೋತ್ತರ, ಸಂವಾದಕ್ಕೂ ಅವಕಾಶವಿರಲಿದೆ. ಮಂಗಳೂರು ವಿಶ್ವವಿದ್ಯಾನಿಲಯಗಳ 60ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ಈಗಾಗಲೇ ನೋಂದಣಿ ಮಾಡಿಸಿದ್ದಾರೆ.
ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಸುಮಾರು 750ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ

