ದಾವಣಗೆರೆ : ಯಾರೋ ದಾರಿಯಲ್ಲಿ ಹೋಗುವವರು ದೂರು ಕೊಟ್ಟಾಕ್ಷಣ ಅರೆಸ್ಟ್ ಅಂದರೆ ಏನರ್ಥ? ಎಂದು ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು, ಬಿ.ಎಸ್. ಯಡಿಯೂರಪ್ಪ ಪರ ಧ್ವನಿ ಎತ್ತಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದ್ರೂ ಹೆಣ್ಣುಮಗಳು ಬಂದು ಕಂಪ್ಲೇಂಟ್ ಕೊಟ್ಟ ತಕ್ಷಣ ಬಂಧನ ಅಂದರೆ ಏನರ್ಥ ? ಆರೋಪ ಸಾಬೀತಾದ ನಂತರ ಶಿಕ್ಷೆ ವಿಧಿಸಿದರೆ ಅದಕ್ಕೊಂದು ಅರ್ಥ ಇರುತ್ತದೆ. 53 ಜನರ ವಿರುದ್ಧ ಆಕೆ ಇದೇ ರೀತಿ ಕಂಪ್ಲೇಂಟ್ ಕೊಟ್ಟಿದ್ದಾಳೆ. ಹೀಗೆ ದೂರು ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ ? ಅದೆಲ್ಲಾ ಆರೋಪಗಳು ಸಾಬೀತಾದರೆ ಕ್ರಮವಾಗುತ್ತದೆ ಎಂದರು.
ಚಿತ್ರದುರ್ಗದ ರೇಣುಕಸ್ವಾಮಿ ಎಂಬ ಯುವಕ ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಕಳಿಸಬೇಕಿತ್ತು. ಆದರೆ, ಸಾಯುವಂತೆ ಹೊಡೆಯಬಾರದಿತ್ತು. ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಗಲಿ ಅಥವಾ ಬೇರೆ ಯಾರೇ ಆಗಿರಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.