Home » ಅನೂಪ್‌ ಪೂಜಾರಿ ಅಮರ್‌ ರಹೇ…..
 

ಅನೂಪ್‌ ಪೂಜಾರಿ ಅಮರ್‌ ರಹೇ…..

by Kundapur Xpress
Spread the love

ಕುಂದಾಪುರ : ಜಮ್ಮು-ಕಾಶ್ಮೀರದ ಪೂಂಛ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸೇನಾ ವಾಹನ 350 ಅಡಿ ಕಮರಿಗೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಹುತಾತ್ಮರಾಗಿದ್ದಾರೆ

ಹುತಾತ್ಮ ಯೋಧರನ್ನು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಮಹೇಶ್ ನಾಗಪ್ಪ ಮಾರಿಗೊಂಡ (25), ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ (45) ಹಾಗೂ ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ ಪೂಜಾರಿ ಎಂದು ಗುರುತಿಸಲಾಗಿದೆ.

ಕುಂದಾಪುರ ಬೀಜಾಡಿಯ ನಿವಾಸಿ ಚಂದು ಪೂಜಾರಿ ಹಾಗೂ ನಾರಾಯಣ ಪೂಜಾರಿ ದಂಪತಿಯ ಪುತ್ರ ಅನೂಪ್ ಪೂಜಾರಿ  ಪತ್ನಿ,2 ವರ್ಷದ ಪುತ್ರಿ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. 13 ವರ್ಷಗಳ ಹಿಂದೆ ಸೇನೆಗೆ ಸೇರ್ಪಡೆಗೊಂಡಿದ್ದ ಅವರು, ಪ್ರಸ್ತುತ ಮರಾಠ ಲೈಟ್ ಇನ್ವೆಂಟ್ರಿ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ತಿಂಗಳು ರಜೆಗೆ ಆಗಮಿಸಿ ಡಿ.15 ರಂದು ನಡೆದ ಕೋಟೇಶ್ವರದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮಗಳ ಹುಟ್ಟುಹಬ್ಬ ಆಚರಿಸಿ ಬಳಿಕ ಸೇನೆಗೆ ಹಿಂತಿರುಗಿದ್ದರು. ಅನೂಪ್ ಜೊತೆಗಿದ್ದ ಸ್ನೇಹಿತ, ಯೋಧ ಆಂಜನೇಯ ಪಾಟೀಲ್‌ ತನ್ನ ಸಹೋದರನೊಂದಿಗೆ ತಡರಾತ್ರಿ ಹೊರಟು ಬಂದು ಬೆಳಗ್ಗೆ ಮೃತ ಯೋಧನ ಮನೆಗೆ ಬಂದಿದ್ದಾರೆ

ಇಂದು ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹುಟ್ಟೂರು ಬೀಜಾಡಿಗೆ ಕರೆ ತಂದು, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಅವರು ಕಲಿತ ಬೀಜಾಡಿ ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

 

Related Articles

error: Content is protected !!