ಕುಂದಾಪುರ : ಯೋಧರಿದ್ದ ವಾಹನ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ (31ವರ್ಷ) ಅವರ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ಬೀಜಾಡಿ ಗ್ರಾಮದ ಕಡಲ ತೀರದಲ್ಲಿ ಗುರುವಾರ ನಡೆಯಿತು.
ಅನೂಪ್ ಅವರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಬೀಜಾಡಿಯ ಮನೆಯಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಪಾರ್ಥಿವ ಶರೀರ ಮನೆಗೆ ಬರುತ್ತಿದ್ದಂತೆಯೆ ಪತ್ನಿ ತಾಯಿ, ಆಕ್ರಂದನ ಮುಗಿಲು ಮುಟ್ಟಿತು. ಮನೆ ಮಂದಿಯ ನೋವಿನ ಆಕ್ರಂದನ ಮನ ಕಲಕುವಂತಿತ್ತು. ಕುಟುಂಬದ ಆಧಾರ ಸ್ತಂಭವಾಗಿದ್ದ ಅನೂಪ್ ಪೂಜಾರಿ ಆಗಲುವಿಕೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು
ಇದಕ್ಕಿಂತ ಮೊದಲು ಬೀಜಾಡಿ ಪಡುಶಾಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಬೈಂದೂರು ಗುರುರಾಜ್ ಶೆಟ್ಟಿ ಗಂಟೆಹೊಳೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾಜಿ ಶಾಸಕರಾದ ಕೆ.ರಘುಪತಿ ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪೂಜಾರಿ, ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ, ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಕುಂದರ್, ಸತ್ಯಜಿತ್ ಸುರತ್ಕಲ್, ಮಾಜಿ ಸೈನಿಕರು, ವಿವಿಧ ಇಲಾಖೆಗಳ ಆ ಕಾರಿಗಳು, ಶಾಲೆಯ ವಿದ್ಯಾರ್ಥಿಗಳು ಅಧ್ಯಾಪಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಾಗರೋಪಾದಿಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಾತಿ ಮತ ಬೇಧವಿಲ್ಲದೆ ಸಾಗಿ ಬಂದ ಜನರು ಅನೂಪ್ ಪೂಜಾರಿ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು
ಅಮರ್ ರಹೆ ಅಮರ್ ರಹೆ ಅನೂಪ್ ಪೂಜಾರಿ ಅಮರ್ ರಹ, ಜೈ ಜವಾನ್ ಕೈ ಕಿಸಾನ್, ಭಾರತ್ ಮಾತಾ ಕಿ ಜೈ ಎಂಬ ಘೋಷ ವಾಕ್ಯ ಮೊಳಗುತ್ತಿತ್ತು. ಹುಟ್ಟೂರು ಬೀಜಾಡಿ ಶೋಕ ಸಾಗರದಲ್ಲಿ ಮುಳುಗಿತ್ತು. ಅಂತಿಮ ದರ್ಶನಕ್ಕೆ ಬಂದವರು ದುಖತಪ್ತರಾಗಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಪಾರ್ಥಿವ ಶರೀರ ಸಾಗಿ ಬಂದ ದಾರಿಯುದ್ದಕ್ಕೂ ರಸ್ತೆಯಲ್ಲಿ ಜನರು ರಂಗೋಲಿ ಹಾಕಿ ಅನೂಪ್ ಪೂಜಾರಿ ಅವರಿಗೆ ಅಂತಿಮ ನಮನ ಸಲ್ಲಿಸಿದರೆ, ಅನೇಕ ಕಡೆಗಳಲ್ಲಿ ಅನೂಪ್ ಪೂಜಾರಿ ಅವರ ಬ್ಯಾನರ್, ಕಟೌಟ್ಗಳನ್ನು ಹಾಕಿ ಜನರು ಶ್ರದ್ಧಾಂಜಲಿ ಅರ್ಪಿಸಿದರು.
ಪಾರ್ಥಿವ ಶರೀರ ಸಾಗಿ ಬಂದ ವಿವಿಧೆಡೆಗಳಲ್ಲಿ ಸಾರ್ವಜನಿರು ಅನೂಪ್ ಪೂಜಾರಿ ಅವರ ಅಂತಿಮದರ್ಶನ ಪಡೆದರು. ಹಲವರು ಆರತಿ ಬೆಳಗಿ ಮತ್ತೆ ಹುಟ್ಟಿ ಬಾ ಎಂಬ ಜೈಘೋಷ ಹಾಕಿದರು. ಬೈಕ್, ಕಾರು, ಮತ್ತಿತರ ನೂರಾರು ವಾಹನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾರ್ಥಿವ ಶರೀರ ಹೊತ್ತ ವಾಹನದೊಂದಿಗೆ ಜನರು ಸಾಗಿ ಬಂದು ಗೌರವ ಸಲ್ಲಿಸಿದ ದೃಶ್ಯ ಅದ್ಭುತವಾಗಿತ್ತು. ಅನೂಪ್ ಪೂಜಾರಿ ಗೌರವಾರ್ಥ ಬೀಜಾಡಿ ಪರಿಸರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು.