ಕಲಬುರಗಿ : ಬೀದರ್ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಮೃತನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ ನಡೆಸಿತು. ಇದಕ್ಕೂ ಮೊದಲು ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲೇಬೇಕು ಎಂದರು
ಸಚಿನ್ ಆತ್ಮಹತ್ಯೆಗೆ ಕಾರಣನಾದ ರಾಜು ಕಪನೂರ್ ಒಬ್ಬ ಗೂಂಡಾ. ಅವನನ್ನು ಕಾಂಗ್ರೆಸ್ಸಿಗರು ಗೂಂಡಾ ಕಾಯಿದೆಯಿಂದ ತೆಗೆಸಿದ್ದಾರೆ. ಈಗ ನಮ್ಮವನಲ್ಲ ನಮ್ಮವನಲ್ಲ ಎನ್ನುತ್ತಿದ್ದಾರೆ. ಆರೋಪಿಗಳಲ್ಲಿ ಮೊದಲ 3 ಜನ ಕಾಂಗ್ರೆಸ್ಸಿಗರು ಎಂದು ಗಮನ ಸೆಳೆದರು. ಆತ್ಮಹತ್ಯೆಗಳಿಗೆ ಕಾರಣವಾಗುವ ಭ್ರಷ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ಕೊಡಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ಅಬ್ಬರಿಸಿದರು