ಬೆಂಗಳೂರು : ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನವನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆತಂಕಕಾರಿ ಅಂಶ ಎನ್‌ಐಎ ತನಿಖೆ ವೇಳೆ ಬಹಿರಂಗಗೊಂಡಿದ್ದು, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ರೂವಾರಿಗಳ ಮೂಲ ಗುರಿ ಇದ್ದದ್ದು ಬಿಜೆಪಿ ಕಚೇರಿ ಉಡಾಯಿಸುವುದು ಎಂಬುದನ್ನು ಎನ್‌ಐಎ ಬಹಿರಂಗಪಡಿಸಿದೆ. 2013ರಲ್ಲೂ ಕೂಡ ಇದೇ ಬಿಜೆಪಿ ಕಚೇರಿ ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿತ್ತು. ಇದರಲ್ಲಿ 16 ಮಂದಿ ಗಾಯಗೊಂಡಿದ್ದರು.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೋಮವಾರ ಶಂಕಿತ ಉಗ್ರರಾದ ಅಬ್ದುಲ್ ಮತಿನ್ ತಾಹಾ, ಮುಸಾವಿರ್ ಹುಸೇನ್, ಶೋಯೆಬ್ ಮಿರ್ಜಾ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆತಂಕಕಾರಿ ಮಾಹಿತಿ ಉಲ್ಲೇಖವಾಗಿದೆ.
2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆಯಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಿಸಲು ಶಂಕಿತ ಉಗ್ರರು ಯತ್ನಿಸಿದ್ದರು. ಆ ಯತ್ನ ವಿಫಲವಾದ ಹಿನ್ನೆಲೆ ರಾಮೇಶ್ವರಂ ಕೆಫೆಯಲ್ಲಿ ಮಾ.1ರಂದು ಸ್ಫೋಟಿಸಿದರು ಎಂಬ ವಿಷಯವನ್ನು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.