ತಿರುಪತಿ : ದೇಗುಲದ ಪ್ರಸಾದ ತಯಾರಿಕೆಗೆ ಬಳಸಲು ಪೂರೈಸಿದ್ದ ತುಪ್ಪ ಕಲಬೆರಕೆಯಾಗಿತ್ತು ಎಂಬ ಕಾರಣಕ್ಕೆ ತಮಿಳುನಾಡಿನ ದಿಂಡಿಗುಲ್ ಮೂಲದ ಎಆರ್ ಡೈರಿ ಫುಡ್ಸ್ ವಿರುದ್ದ ತಿರುಪತಿ ತಿರುಮಲ ದೇಗುಲ ಮಂಡಳಿ (ಟಿಟಿಡಿ) ದೂರು ದಾಖಲಿಸಿದೆ.
ದೇಗುಲಕ್ಕೆ ಪೂರೈಕೆ ಮಾಡುತ್ತಿರುವ ತುಪ್ಪ ಕಲಬೆರಕೆಯಾಗಿದೆ ಎಂಬ ಅನುಮಾನಗಳ ಹಿನ್ನೆಲೆಯಲ್ಲಿ ಟಿಟಿಡಿ, ತುಪ್ಪ ಪೂರೈಸುವ ನಾಲ್ಕು ಸಂಸ್ಥೆಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಸಂಬಂಧ ವರದಿ ನೀಡಿದ್ದ ಗುಜರಾತ್ ಮೂಲದ ಪ್ರಯೋಗಾಲಯವು, ತಮಿಳುನಾಡು ಮೂಲದ ಸಂಸ್ಥೆ ಪೂರೈಸಿದ್ದ ತುಪ್ಪದಲ್ಲಿ ದನ, ಹಂದಿಯ ಕೊಬ್ಬಿನ ಅಂಶ ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಟಿಟಿಡಿ ದೂರು ದಾಖಲಿಸಿದೆ. ಆದರೆ ತಾನು ಶುದ್ದತೆಯ ಪರೀಕ್ಷೆಗೆ ಒಳಪಡಿಸಿದ ಮತ್ತು ಶುದ್ಧತೆಯ ಪ್ರಮಾಣಪತ್ರ ಹೊಂದಿದ ತುಪ್ಪವನ್ನು ಮಾತ್ರವೇ ತಿರುಪತಿಗೆ ಸರಬರಾಜು ಮಾಡಿದ್ದಾಗಿ ಎಆರ್ ಡೈರಿ ಇತ್ತೀಚೆಗೆ ಸ್ಪಷ್ಟನೆ ನೀಡಿತ್ತು.