ಬೆಂಗಳೂರು : ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ಕಾಂಗ್ರೆಸ್ ಸರ್ಕಾರ ತಂದು ನಿಲ್ಲಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಾರಿಗೆ ಇಲಾಖೆ ನೌಕರರು ಡಿ. 31ರಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಸಾರಿಗೆ ಇಲಾಖೆ ನೌಕರರ ಜೊತೆಗೆ ಬಿಜೆಪಿ ನಿಲ್ಲಲಿದೆ ಎಂದು ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ಇಲಾಖೆ ಲಾಭದಲ್ಲಿದೆ ಎನ್ನುತ್ತಾರೆ. ಸಚಿವರೇ ಇಷ್ಟು ಅಜ್ಞಾನಿಗಳಾದರೆ ಇನ್ನು ಜನಸಾಮಾನ್ಯರ ಪಾಡೇನು ? ಇದು ರಾಜ್ಯದ ದುರ್ದೈವ ಎಂದು ವ್ಯಂಗ್ಯವಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಬಿಎಂಟಿಸಿಯ ಎಂ.ಡಿ. ಆಗಿದ್ದಾಗ ಆ ಸಂಸ್ಥೆಯನ್ನು ನಷ್ಟದಿಂದ ಲಾಭಕ್ಕೆ ತಂದರು. ಇಲಾಖೆಗೆ ಬಹಳಷ್ಟು ಆಸ್ತಿಯನ್ನೂ ಮಾಡಿದ್ದರು. 700 ಕೋಟಿ ಮೊತ್ತ ಠೇವಣಿ ಇಟ್ಟಿದ್ದರು ಎಂದು ವಿವರಿಸಿದರು.
ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ಆಸ್ತಿ ಮಾರಾಟ ಮಾಡಲು ಈ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು