ವಯನಾಡ್ : ಕೇರಳದ ವಯನಾಡಿನಲ್ಲಿ ಭಾರೀ ಗುಡ್ಡ ಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 330 ದಾಟಿದೆ ಇನ್ನೂ 300 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಗುಡ್ಡ ಕುಸಿತದ ಜಾಗದಲ್ಲಿ ಹತ್ತಾರು ಅಡಿ ಎತ್ತರದ ಮಣ್ಣು ಇರುವುದರಿಂದ ಅವುಗಳಡಿ ಸಿಲುಕಿರಬಹುದಾದ ಸಂತ್ರಸ್ತರನ್ನು ಪತ್ತೆ ಹಚ್ಚುವುದು ರಕ್ಷಣಾ ತಂಡಗಳಿಗೆ ಅಸ್ತಾಧ್ಯವಾಗಿದೆ. ಹೀಗಾಗಿ ಜಿಪಿಎಸ್ ಕೋಆರ್ಡಿನೇಟ್ಸ್ ಡೋನ್‌ಗಳನ್ನು ಹಾರಿಸಿ ತೆಗೆದ ಚಿತ್ರಗಳು ಹಾಗೂ ಸಂತ್ರಸ್ತರ ಬಳಿ ಇದ್ದ ಮೊಬೈಲ್ ಫೋನ್‌ಗಳ ಕೊನೆಯ ಲೊಕೇಶನ್ ಸುಳಿವುಗಳನ್ನು ಆಧರಿಸಿ ಹುಡುಕಾಟ ನಡೆಸಲಾಗುತ್ತಿದೆ ಎಂದು ವಯನಾಡಿನ ಜಿಲ್ಲಾಧಿಕಾರಿ, ಕನ್ನಡತಿ ಮೇಘಶ್ರೀ ಡಿ.ಆರ್. ಮಾಹಿತಿ ನೀಡಿದ್ದಾರೆ.
ಒಂದೇ ಮನೆಯಲ್ಲಿ 4 ಜನ ಪತ್ತೆ:
ರಕ್ಷಣಾ ಕಾರ್ಯಾಚರಣೆಯ ನಾಲ್ಕನೇ ದಿನವಾದ ಶುಕ್ರವಾರ ಗುಡ್ಡ ಕುಸಿತದ ವ್ಯಾಪ್ತಿಯಲ್ಲಿ ಸಿಲುಕಿದ್ದ ಪದವೆಟ್ಟಿ ಕುನ್ನು ಎಂಬಲ್ಲಿಂದ ಒಂದೇ ಮನೆಯ ನಾಲ್ವರನ್ನು ರಕ್ಷಿಸಲಾಗಿದೆ. ಇದೇ ರೀತಿ ಜೀವ ಉಳಿಸಿಕೊಂಡವರು ಪತ್ತೆಯಾಗಬಹುದು ಎಂಬ ಆಶಾಭಾವನೆಯನ್ನು ಈ ಘಟನೆ ಮೂಡಿಸಿದೆ. ಆದರೂ, ನಾಪತ್ತೆಯಾಗಿರುವ 300 ಜನರಲ್ಲಿ ಮೃತಪಟ್ಟವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲೇ ಇರುವ ಸಾಧ್ಯತೆಯಿದ್ದು, ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ.