ಬೆಂಗಳೂರಯ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ವಿಷಯ ನಿರೀಕ್ಷೆಯಂತೆ ವಿಧಾನ ಮಂಡಲದ ಉಭಯ ಸದನಗಳ ಆರಂಭದ ದಿನವೇ ಪ್ರಸ್ತಾಪವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು.
ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷ ಗಳು ಈ ವಿಷಯವನ್ನು ಉಭಯ ಸದನಗಳಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದು ಚರ್ಚೆಗೆ ಅವಕಾಶ ಪಡೆದುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ನಿಲುವಳಿ ಮಂಡಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆಕ್ಷೇಪಿಸಿದ್ದರಿಂದ ತೀವ್ರ ಜಟಾಪಟಿ ಆರಂಭಗೊಂಡಿದ್ದು, ಇದು 2 ಬಾರಿ ಕಲಾಪ ಮುಂದೂಡಿಕೆಗೂ ಕಾರಣವಾಗಿತ್ತು. ಅಂತಿಮವಾಗಿ ವಿಚಾರ ಚರ್ಚೆಗೆ ಬಂದಾಗ ಬಿಜೆಪಿಯ ಸಿ.ಟಿ. ರವಿ ಅವರು ಯಾರ ಹೆಸರೂ ಉಲ್ಲೇಖಿಸದೆ ‘ಸರ್ಪ’ಕ್ಕೆ ಇನ್ನೊಂದು ಹೆಸರಾದ ಮಾಜಿ ಸಚಿವರು, ನಂ.1, ನಂ.2 ಸ್ಥಾನದಲ್ಲಿರುವವರು ಎಂದಿದ್ದು ಕಾಂಗ್ರೆಸ್ಸಿಗರನ್ನು ಕೆರಳಿಸಿತು. ಇದರಿಂದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಕೆಲ ಕಾಲ ತೀವ್ರ ಮಾತಿನ ವಾಗ್ವಾದ ನಡೆಯಿತು. ಕೊನೆಗೆ ಸಭಾಪತಿಗಳು ಕೆರಳಿಸುವ ಮಾತು ಆಡದೇ ಚರ್ಚಿಸುವಂತೆ ಸಿ.ಟಿ.ರವಿ ಅವರಿಗೆ ಸೂಚಿಸಿದರು.