ಬೆಂಗಳೂರು : ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ, ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.’ ಮುಡಾ ಹಗರಣ ಹೊರಬರುವಲ್ಲಿ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂಬ ಕುಮಾರಸ್ವಾಮಿ ಪರೋಕ್ಷ ಆರೋಪಕ್ಕೆ ಶುಕ್ರವಾರ ವಿಧಾನಸೌಧದಲ್ಲಿ ಕಿಡಿಕಾರಿದ ಅವರು, ಮುಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ‘ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕೆಲವೊಬ್ಬರಿಗೆ ಪ್ರತಿದಿನ ನನ್ನನ್ನು ನೆನಪಿಸಿಕೊಳ್ಳ ದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ತಿರುಗೇಟು ನೀಡಿದರು. ಮಂಡ್ಯದಲ್ಲಿ ಜನತಾದರ್ಶನಕ್ಕೆ ಅಧಿಕಾರಿಗಳು ಹೋಗಬಾರದೆಂದು ರಾಜ್ಯ ಸರ್ಕಾರ ದಿಂದ ಸೂಚನೆ ನೀಡಲಾಗಿದೆ ಎಂಬುದು ಸರಿಯಲ್ಲ. ಜನರನ್ನು ಇಟ್ಟುಕೊಂಡು ಜನತಾ ದರ್ಶನ ಮಾಡಲಿ ಅಥವಾ ಹಳ್ಳಿ, ಹಳ್ಳಿ ತಿರುಗಲಿ, ಯಾರು ಬೇಡ ಎಂದಿದ್ದಾರೆ. ಅಧಿಕಾರಿಗಳು ಅವರ ಶಿಷ್ಟಾಚಾರ ಪಾಲಿಸುತ್ತಾರೆ. ಅದರ ಪ್ರಕಾರ ಸಂಸದರನ್ನು ಹೇಗೆ ಸ್ವಾಗತಿಸಬೇಕೋ ಆ ರೀತಿ ಕೆಲಸ ಮಾಡುತ್ತಾರೆ ಎಂದರು