ಬೆಳಗಾವಿ : ವಕ್ಸ್ ಮಂಡಳಿ ವಿವಾದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವ ಸಂಬಂಧ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲ ಉಂಟಾದ ಕಾರಣ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.
ಶುಕ್ರವಾರ ಪ್ರಶೋತ್ತರ ಬಳಿಕ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯಾದ್ಯಂತ ಆಸ್ತಿಗಳ ಪಹಣಿಗಳಲ್ಲಿ ಏಕಾಏಕಿ ವಕ್ಸ್ ಆಸ್ತಿ ಎಂದು ನಮೂದಾಗಿರುವ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಆದರೆ, ಈ ಪ್ರಸ್ತಾಪಕ್ಕೆ ಆಡಳಿತ ಪಕ್ಷದವರು ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಅತ್ಯಾಚಾರ, ಜಾತಿ ನಿಂದನೆ ವಿಚಾರ ಪ್ರಸ್ತಾಪಕ್ಕೆ ಸಮಯ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ವಕ್ಸ್ ವಿಚಾರ ಪ್ರಸ್ತಾಪಿಸಲು ಅಡ್ಡಿ ಪಡಿಸುತ್ತಿರುವ ಕಾಂಗ್ರೆಸ್ ಸದಸ್ಯರ ವಿರುದ್ಧ ಕಿಡಿಕಾರಿದ ಆರ್.ಅಶೋಕ ಕಲಾಪಕ್ಕೆ ಅಡ್ಡಿ ಮಾಡುವ ಸದಸ್ಯರನ್ನು ಅಮಾನತುಗೊಳಿಸಿ ಎಂದು ಆಗ್ರಹಿಸಿದರು. ಈ ವೇಳೆ ಸಭಾಧ್ಯಕ್ಷ ಯು.ಟಿ.ಖಾದರ್ ಮಧ್ಯಪ್ರವೇಶಿಸಿ, ಆಡಳಿತ ಪಕ್ಷದವರಿಗೆ ಏನಾಗಿದೆ ? ಉಪಯೋಗಕ್ಕೆ ಬಾರದವರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಪಕ್ಷ ಸದಸ್ಯರು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಸಭಾತ್ಯಾಗ ನಡೆಸಿದರು. ಕೆಲ ಸಮಯದ ಬಳಿಕ ಸದನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು, ಮತ್ತೊಮ್ಮೆ ವಿಷಯ ಪ್ರಸ್ತಾಪಿಸಲು ಅವಕಾಶ ಕೋರಿದರು ಮತ್ತೊಮ್ಮೆ ಅಡ್ಡಿಪಡಿಸಲು ಮುಂದಾದ ನರೇಂದ್ರಸ್ವಾಮಿಯನ್ನು ಹೊರ ಹೋಗುವಂತೆ ಸಭಾಧ್ಯಕ್ಷರು ತಿಳಿಸಿ, ಎಚ್ಚರಿಕೆ ನೀಡಿದರು.