ಹಾಸನ : ಹಣ ಎಷ್ಟೇ ಖರ್ಚಾದರೂ ಹೇಳಿದ ಎಲ್ಲ ಕೆರೆಗಳಿಗೆ ನೀರು ತುಂಬಿಸುತ್ತೇವೆ. ನಮ್ಮ ಅವಧಿಯೊಳಗೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮ ಸಮೀಪ ಶುಕ್ರವಾರ ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಉದ್ಘಾಟಿಸಿ, ಗಂಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಏಳು ಜಿಲ್ಲೆಗಳಿಗೆ ನೀರು ಕೊಡುವ ಮಹತ್ತರ ಯೋಜನೆ ಇದಾಗಿದೆ. ಆರಂಭದಿಂದ ಹಲವು ಟೀಕೆ, ವಿರೋಧದ ಮಾತುಗಳನ್ನೆಲ್ಲ ಕೇಳಿದರೂ ಛಲ ಬಿಡದೇ ಯೋಜನೆಯನ್ನು ಒಂದು ಹಂತಕ್ಕೆ ತಂದಿದ್ದೇವೆ. 2027ರ ಒಳಗೆ ಬಯಲು ಸೀಮೆಯ ನಿಗಧಿತ ಜಿಲ್ಲೆಗಳಿಗೆ ನೀರು ಹರಿಸಿಯೇ ಹರಿಸುತ್ತೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಆಸಕ್ತಿ ಫಲವಾಗಿ ಕಾಮಗಾರಿಗಳಿಗೆ ವೇಗ ದೊರೆತಿವೆ. ಉಳಿದ ಕೆಲಸಗಳೂ ಸಾಧ್ಯವಾದಷ್ಟು ಬೇಗ ಮುಗಿಯುತ್ತವೆ ಎಂದರು.
ಮೊದಲ ಹಂತದ ಯೋಜನೆ ಲೋಕಾರ್ಪಣೆ
ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದಾಗ ಎತ್ತಿನಹಳ್ಳದಲ್ಲಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದ ಮಾಹಿತಿ ದೊರೆಯಿತು. ಸ್ಥಳಕ್ಕೆ ತಜ್ಞರ ತಂಡದೊಂದಿಗೆ ಬಂದು ವೀರಪ್ಪ ಮೊಯ್ಲಿ ಅವರ ಕಲ್ಪನೆಯಂತೆ ನಾನು ಸಿಎಂ ಆಗಿದ್ದಾಗ ಕ್ರಿಯಾ ಯೋಜನೆ ಸಿದ್ದಪಡಿಸಿ ಶಂಕುಸ್ಥಾಪನೆ ನೆರವೇರಿಸಿದ್ದವು. ನಾನಾ ಎಡರು ತೊಡರುಗಳನ್ನು ದಾಟಿ ಸುಮಾರು 10 ವರ್ಷಗಳ ಬಳಿಕ ನಾವೇ ಉದ್ಘಾಟನೆ ಮಾಡುತ್ತಿದ್ದೇವೆ. ಎಲ್ಲ ಟೀಕಾಕಾರರಿಗೂ ಇದರಿಂದ ಉತ್ತರ ಲಭಿಸಿದೆ ಎಂದು ಭಾವಿಸುತ್ತೇನೆ ಎಂದರು