ಬೀದರ : ನಗರದ ಡಿಸಿ ಕಚೇರಿ ಪಕ್ಕದ ಎಸ್‌ಬಿಐ ಬ್ಯಾಂಕ್ ಎದುರು ಗುರುವಾರ ನಡೆದ ಶೂಟೌಟ್, ಒಬ್ಬನ ಹತ್ಯೆ, ಇನ್ನೊಬ್ಬ ಗಂಭೀರ ಗಾಯ ಮತ್ತು 83 ಲಕ್ಷ ರೂ.ದರೋಡೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಸಂಬಂಧ ಪೊಲೀಸರಿಗೆ ಇನ್ನೂ ಆರೋಪಿಗಳ ಕುರಿತು ಪಕ್ಕಾ ಸುಳಿವು ಸಿಕ್ಕಿಲ್ಲ.
ಹಾಡ ಹಗಲೇ ಅಟ್ಟಹಾಸ ಮೆರೆದು ಸರ್ಕಾರ, ಪೊಲೀಸ್ ಇಲಾಖೆ, ಕಾನೂನು ಸುವ್ಯವಸ್ಥೆಗೆ ಸವಾಲೆಸೆದ ಈ ಖತರ್ನಾಕ್ ಕಿಲಾಡಿಗಳ ಹಿಂದಿನ ಶಕ್ತಿ ಯಾರಿರಬಹುದು? ಯಾರೊಂದಿಗೆ ಇವರ ಲಿಂಕ್ ಇದೆ ಎಂಬ ಪ್ರಶ್ನೆ ಭಾರಿ ಕುತೂಹಲ ಮೂಡಿಸಿದೆ.
ಮುಸುಕುಧಾರಿ ಆಗಂತುಕರ ಮೋಡಸ್ ಅಪರಂಡಿ ಗಮನಿಸಿದರೆ ಇದೊಂದು ನಟೋರಿಯಸ್ ಗ್ಯಾಂಗ್ ಎಂಬುದು ಸ್ಪಷ್ಟ.
ಇಬ್ಬರೇ ಈ ಕೃತ್ಯ ಎಸಗಿರಲು ಸಾಧ್ಯವಿಲ್ಲ ಎನ್ನುತ್ತಿದ್ದರಿಂದ ಇದರ ಹಿಂದೆ ಅಂತಾರಾಜ್ಯ ಜಾಲ ಸಕ್ರಿಯವಿರುವ ಸಾಧ್ಯತೆ ದಟ್ಟವಾಗಿವೆ. ಬೆಳಿಗ್ಗೆ ಬೀದರ್ ನಲ್ಲಿ ಶೂಟೌಟ್ ನಡೆದರೆ, ಸಂಜೆ ಇಲ್ಲಿಂದ 130 ಕಿಲೋಮೀಟರ್ ದೂರದ ತೆಲಂಗಾಣದ ರಾಜಧಾನಿ ಹೈದರಾಬಾದ್ ಅಫೈಲ್‌ಗಂಜ್ ನಲ್ಲಿ ಸಹ ಶೂಟೌಟ್ ಆಗಿದೆ.
ಎರಡೂ ಪ್ರಕರಣಕ್ಕೆ ಸಾಮ್ಯತೆಯಿದ್ದು, ಇಲ್ಲಿಂದ ಎಸ್ಕೆಪ್ ಆದ ಗ್ಯಾಂಗ್ ಈ ಕೃತ್ಯ ಎಸಗಿದ ಶಂಕೆ ಬಲವಾಗಿದೆ. ಹೈದರಾಬಾದ್‌ನಲ್ಲಿ ಕೃತ್ಯ ಎಸಗಿದವರು ಛತ್ತೀಸಗಢ ರಾಜ್ಯದ ರಾಯಪುರ್ ಹೋಗಲು ತಯಾರಿ ನಡೆಸಿದ ಮಾಹಿತಿ ಬಂದಿರುವುದು ಈ ಪ್ರಕರಣಕ್ಕೆ ನಕ್ಸಲ್ ನಂಟೇನಾದರೂ ಇದೆಯಾ? ಎಂಬ ಗುಮಾನಿ ಎದ್ದಿವೆ. ಹೀಗಾಗಿ ಪ್ರಕರಣದ ಜಾಡು ಬೇಗ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲೆನಿಸಿದೆ.
ಸದ್ಯ ಛತ್ತೀಸಗಡ್ ನಲ್ಲಿ ನಕ್ಸಲ್ ಅಟ್ಟಹಾಸ ಅತಿಯಾಗಿದೆ. ದಾಂತೇವಾಡ, ಬಿಜಾಪುರ ಇತರೆ ಜಿಲ್ಲೆಗಳಲ್ಲಿ ನಿತ್ಯವೂ ಕೇಂದ್ರ, ರಾಜ್ಯ ಪಡೆಗಳಿಂದ ಕೂಂಬಿಂಗ್ ಆಪರೇಷನ್ ನಡೆದಿದೆ. ನಕ್ಸಲೀಯರ ವಿಷಯದಲ್ಲಿ ಸರ್ಕಾರಗಳು ಈಗ ಸರೆಂಡರ್ ಆರ್ ಎನ್‌ಕೌಂಟರ್ ನಿಲುವು ತಾಳಿವೆ. ಕೂಂಬಿಂಗ್‌ನಲ್ಲಿ ತತ್ತರಿಸಿದ ನಕ್ಸಲೀಯರಿಗೆ ಹಣಕಾಸಿನ ತೊಂದರೆ ಆಗಿರಬಹುದು. ದೊಡ್ಡ ಮೊತ್ತ ಬೇಕಾದ ಕಾರಣ ಬ್ಯಾಂಕ್, ಎಟಿಎಂ ಲೂಟಿಗೆ ಸ್ಕೆಚ್ ಹಾಕಿ ಇಂಥ ಕೃತ್ಯಕ್ಕೆ ಕೈ ಹಾಕಿರಬಹುದಾ? ಎಂಬ ಶಂಕೆ ಮೂಡಿದೆ