ಹೈದರಾಬಾದ್: ದಿಲ್ಲಿ ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಶುಕ್ರವಾರ ಬಿ ಆರ್ ಎಸ್ ನಾಯಕಿ ಹಾಗೂ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರ ಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಿದೆ.
ಇ.ಡಿ ತಂಡವು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ನಡೆದ ಈ ಬೆಳವಣಿಗೆಯು ಬಿ ಆರ್ ಎಸ್ ಪಾಲಿಗೆ ಸಂಕಷ್ಟ ತಂದೊಡ್ಡಲಿದೆ ಎನ್ನಲಾಗಿದೆ. ಕೆ. ಕವಿತಾ ಅವರು ಸದ್ಯ ತೆಲಂಗಾಣ ವಿಧಾನ ಪರಿಷತ್ ಸದಸ್ಯರು. ಅವರನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯುವ ಮುನ್ನ ಇ.ಡಿ ಅಧಿಕಾರಿಗಳ ತಂಡವು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಬಿಆರ್‌ಎಸ್ ನಾಯಕಿ ನಿವಾಸದ ಮೇಲೆ ದಾಳಿ ನಡೆಸಿತ್ತು. ಸುಮಾರು 5 ಗಂಟೆಗಳ ಶೋಧ ನಡೆಸಿದ ಅಧಿಕಾರಿಗಳ ತಂಡವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.