ನಮಗಿಂತ ಉತ್ತಮವಾಗಿ ಬದುಕು ನಡೆಸಿದವರನ್ನು ನಾವು ಅನುಸರಿಸುವುದು ಸಹಜವೇ, ಒಳ್ಳೆಯ ನಡೆ, ನುಡಿ, ಆಚಾರ, ವಿಚಾರ, ಸದ್ಭಾವನೆ, ವಿನಯಶೀಲತೆ, ನಿಸ್ವಾರ್ಥ ಮುಂತಾದ ಸದ್ಗುಣಗಳಿಂದ ಬದುಕನ್ನು ಆದರ್ಶಪ್ರಾಯವಾಗಿ ನಡೆಸಿದವರು ನಮಗೆ ಬದುಕಿನ ಮಾದರಿ ವ್ಯಕ್ತಿತ್ವದವರೆನಿಸುತ್ತಾರೆ. ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ಲಾಲ್ ಬಹಾದ್ದೂರ್ ಶಾಸ್ತ್ರೀ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮುಂತಾಗಿ ಹಲವಾರು ಪುಣ್ಯಪುರುಷರು, ಸಾಧಕ ಪುರುಷರು, ಸಂತರು ನಮಗೆ ಸ್ಫೂರ್ತಿಯ ಚೆಲುಮೆಯಾಗಿದ್ದಾರೆ. ಈ ಆದರ್ಶ ಪುಣ್ಯಪುರುಷರು ತಮ್ಮ ನಿಸ್ವಾರ್ಥ ಹಾಗೂ ತ್ಯಾಗಮಯ ಬದುಕಿನಿಂದಲೇ ವಂದನೀಯರಾದರು ಎನ್ನುವುದನ್ನು ನಾವು ಮರೆಯುವಂತಿಲ್ಲ. ಒಬ್ಬರ ಬದುಕು ಇನ್ನೊಬ್ಬರಿಗೆ ಆದರ್ಶಪ್ರಾಯವಾಗುವಲ್ಲಿ ತ್ಯಾಗಶೀಲತೆ ಹಾಗೂ ನಿಸ್ವಾರ್ಥವೆಂಬ ಸದ್ಗುಣಗಳು ಮುಖ್ಯವಾಗುತ್ತವೆ. ಕರ್ಮಫಲದ ಆಸೆಯಿಲ್ಲದೆ ಯಾವತ್ತೂ ಮಾಡುವ ಕರ್ಮಗಳು ಸತ್ಕರ್ಮಗಳೆನಿಸುತ್ತವೆ. ನಿಜಕ್ಕಾದರೆ ಈ ವಿಷಯದಲ್ಲಿ ಸ್ವತಃ ದೇವರೇ ನಮಗೆ ಮೊದಲ ಆದರ್ಶ. ಗೀತೆಯಲ್ಲಿ ಶ್ರೀ ಕೃಷ್ಣ ಸಾರುವುದು ಇದನ್ನೇ: ‘ಕರ್ಮಗಳ ಫಲದಲ್ಲಿ ನನಗೆ ಕಿಂಚಿತ್ ಇಚ್ಛೆಯೂ ಇರುವುದಿಲ್ಲ. ಆದುದರಿಂದಲೇ ಕರ್ಮಗಳು ನನ್ನನ್ನು ಅಂಟಿಕೊಳ್ಳುವುದಿಲ್ಲ. ಇದನ್ನು ಯಥಾರ್ಥವಾಗಿ ತಿಳಿದುಕೊಂಡು ಯಾರು ನನ್ನನ್ನು ಅನುಸರಿಸುತ್ತಾನೋ ಅವನಿಗೂ ಕರ್ಮಬಂಧನ ಉಂಟಾಗುವುದಿಲ್ಲ.’ ಕರ್ಮಫಲ ಬಯಸದೆ ಕರ್ಮನಿರತರಾಗುವುದಾದರೂ ಹೇಗೆ? ಈ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜವೇ. ಕರ್ಮಫಲ ತ್ಯಾಗದಿಂದ ಬದುಕನ್ನು ಅಲಿಪ್ತವಾಗಿ ನಡೆಸಲು ಸಾಧ್ಯವಾಗುವುದರಲ್ಲೇ ಕರ್ಮಬಂಧನದಿಂದ ಮುಕ್ತಿ ಇದೆ. ಸಚ್ಛಿದಾನಂದ ಪ್ರಾಪ್ತಿಯೇ ಕರ್ಮಫಲ ತ್ಯಾಗದ ಪರಮೋದ್ದೇಶವಾಗಿದೆ.