- ಏಕಾಗ್ರತೆ
ಧ್ಯಾನದ ಮೂಲಕ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬಹುದು ಎನ್ನುವಾಗ ಧ್ಯಾನ ಎಂದರೆ ಏನು ಎನ್ನುವುದನ್ನೂ ನಾವು ತಿಳಿದುಕೊಳ್ಳಬೇಕು. ತದೇಕಚಿತ್ತದಿಂದ ಮನಸ್ಸನ್ನು ಒಂದೇ ಕಡೆ ಕೇಂದ್ರೀ ಕರಿಸುವುದು ಧ್ಯಾನದ ಮೊದಲ ಉಪಕ್ರಮ. ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಲು ಕಣ್ಣು ಮುಚ್ಚಿಕೊಂಡು ಯಾವುದಾದರೊಂದು ನಿರ್ದಿಷ್ಟ ಆಕೃತಿಯನ್ನು, ಸಂಕೇತವನ್ನು, ಬೇಕಿದ್ದರೆ ಇಷ್ಟದೇವರ ರೂಪವನ್ನು ಮನಸ್ಸನಲ್ಲಿ ಪಡಿಮೂಡಿಸಿಕೊಂಡು ಮನಸ್ಸನ್ನು ಅದರಲ್ಲೇ ನೆಟ್ಟುಬಿಡುವುದು ಒಂದು ಸರಳ ಉಪಾಯ. ಇದಕ್ಕಿಂತಲೂ ಸರಳವಾದ ಮತ್ತೊಂದು ಉಪಾಯವೆಂದರೆ ಕಣ್ಣುಗಳನ್ನು ಮುಚ್ಚಿಕೊಂಡ ಸ್ಥಿತಿಯಲ್ಲಿ ಮನಸ್ಸನ್ನು ಸಂಪೂರ್ಣವಾಗಿ ಉಸಿರಾಟದ ಮೇಲೆ ಕೇಂದ್ರೀಕರಿಸಿ ಅದರ ಗಣನೆಗೆ ತೊಡಗುವುದು. ದೇವರ ನಾಮವನ್ನು ಜಪಿಸುವುದು ಕೂಡ ಇನ್ನೊಂದು ಸುಲಭದ ವಿಧಾನ. ಯೋಗಾಭ್ಯಾಸ ನಿರತರಿಗೆ ಸ್ವಸ್ತಿಕಾಸನದಲ್ಲಿ ಇಲ್ಲವೇ ಪದ್ಮಾಸನದಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಾಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದನ್ನು ಗಣಿಸುವ ಪ್ರಕ್ರಿಯೆಯಲ್ಲಿ ಧ್ಯಾನವನ್ನು ನಡೆಸುವ ಉಪಾಯ ತಿಳಿಸಿರುತ್ತದೆ. ಇಷ್ಟಕ್ಕೂ ಧ್ಯಾನದ ಮೂಲಕ ಮೂಲಭೂತವಾಗಿ ನಾವು ಏನನ್ನು ಸಾಧಿಸುತ್ತೇವೆ ಎಂಬುವುದನ್ನು ತಿಳಿಯಬೇಕು. ಮಕರಂದವನ್ನು ಹೀರುವ ಆಸೆಯಲ್ಲಿ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಸದಾ ಹಾರುತ್ತಲೇ ಇರುವ ದುಂಬಿಗೆ ನಮ್ಮ ಮನಸ್ಸನ್ನು ಹೋಲಿಸಬಹುದಷ್ಟೇ? ಅಂತಹ ಚಂಚಲ ಮನಸ್ಸನ್ನು ಸ್ವಲ್ಪ ಹೊತ್ತಿನ ಮಟ್ಟಿಗಾದರೂ ‘ನಿಶ್ಚಲ’ ಗೊಳಿಸುವುದೇ ಮನಸ್ಸಿನ ಏಕಾಗ್ರತೆಯನ್ನು ಸಾಧಿಸುತ್ತ ನಾವಿಡುವ ಮೊದಲ ಹೆಜ್ಜೆ.