- ಶಿಸ್ತುಬದ್ಧ ಜೀವನ
ಶಿಸ್ತುಬದ್ಧವಾಗಿ ಜೀವಿಸುವುದಕ್ಕೆ ಮಿಗಿಲಾದ ತಪಸ್ಸು ಬೇರೊಂದಿಲ್ಲ. ತನ್ನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯುವಾತನಿಗೆ ಶಿಸ್ತುಬದ್ಧ ಜೀವನದಿಂದಲೇ ಮನಸ್ಸಿನ ಪ್ರಫುಲ್ಲತೆ ಪ್ರಾಪ್ತವಾಗುತ್ತದೆ. ಆ ಶಿಸ್ತು ಆಹಾರ–ವಿಹಾರ, ನಡೆ–ನುಡಿಗಳಲ್ಲೂ ವ್ಯಕ್ತವಾಗ ಬೇಕು. ಆಗ ಮಾತ್ರವೇ ಏಕನಿಷ್ಠೆ, ಏಕಾಗೃತೆ ಸಾಧ್ಯವಾಗುತ್ತದೆ. ಬದುಕು ಸ್ವಚ್ಛ, ಸುಂದರ, ಶಾಂತವಾಗಿರಲು ಪೂರಕವಾಗುತ್ತದೆ. ಮನೋಚಾಂಚಲ್ಯವನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಬಾಳು ಸಾಧನೆಯ ಪಥದಲ್ಲಿ ನಿರಾಯಾಸವಾಗಿ ಸಾಗುತ್ತದೆ. ಬೌದ್ಧ ಗುರು ದಲಾಯಿಲಾಮಾ ಅವರ ಪ್ರಕಾರ ‘ಆಂತರ್ಯದಿಂದ ವಿಧಿಸಲ್ಪಡುವ ಶಿಸ್ತೇ ನಿಜವಾದ ಶಿಸ್ತು’. ವಿಲಿಯಂ ಜೇಮ್ಸ್ ಎನ್ನುವ ಆಂಗ್ಲ ಚಿಂತಕ, ಶಿಸ್ತುಬದ್ಧ ಬದುಕಿನ ಸಾಧಕ ಪುರುಷನನ್ನು ಗುರುತಿಸುವುದು ಹೀಗೆ. ಏಕನಿಷ್ಠೆ ಹಾಗೂ ಏಕಾಗ್ರತೆಯಿಂದ, ಬಿಡದ ಛಲದೊಂದಿಗೆ ಮುನ್ನುಗ್ಗಿ ಮನೋಚಾಂಚಲ್ಯವನ್ನು ಬಡಿದಟ್ಟುವ ವ್ಯಕ್ತಿ ಮಾತ್ರವೇ ಪ್ರಯತ್ನಶೀಲನೆನಿಸುತ್ತಾನೆ. ತನ್ನ ಸುತ್ತಮುತ್ತಲಿನ ಜನಸಾಮಾನ್ಯರು ಬಿರುಗಾಳಿಗೊಡ್ಡಿ ತರಗೆಲೆಗಳಂತೆ ಚದುರಿ ನಿರ್ನಾಮವಾದರೂ ಈ ಪ್ರಯತ್ನಶೀಲ ಸಾಧಕನು ಮಾತ್ರ ಮುಗಿಲೆತ್ತರಕ್ಕೇರುವ ಗೋಪುರದಂತೆ ದೃಢವಾಗಿ ಕಂಗೊಳಿಸುತ್ತಾನೆ. ನಿಜಕ್ಕೂ ಬದುಕಿನಲ್ಲಿ ಈ ಸಮಸ್ಥಿತಿಯನ್ನು ಸಾಧಿಸುವುದು ಬಹಳ ದೊಡ್ಡ ತಪಸ್ಸು. ಈ ತಪಸ್ಸನ್ನು ಸಾಧಿಸುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಸರ್ವ ಬಂಧನದಿಂದ ಮುಕ್ತ. ಗಾಂಧೀಜಿಯವರು ಸತ್ವಾನ್ವೇಷಣೆಯ ತಮ್ಮ ಪ್ರಯೋಗದಲ್ಲಿ ಕಂಡುಕೊಂಡ ಸತ್ಯವೂ ಇದೇ. ಆದರೆ ಶಿಸ್ತುಬದ್ಧ ಜೀವನವನ್ನು ನಡೆಸುವುದಕ್ಕೂ ಸಂಕಲ್ಪ ಬೇಕು. ಸಂಕಲ್ಪವಿಲ್ಲದೆ ಅಂತಹ ಬದುಕಿಗೆ ತೊಡಗಲು ಸಾಧ್ಯವಾಗದು. ನಿಧಾನವಾಗಿ ಆದರೆ ನಿಶ್ಚಿತವಾಗಿ ಅನುಷ್ಠಾನಿಸಲ್ಪಡುವ ಶಿಸ್ತನ್ನು ಪ್ರಯೋಗಗಳ ಮೂಲಕವೇ ಮೈಗೂಡಿಸಬಹುದು ಎಂಬುದು ಗಾಂಧೀಜಿಯವರ ಕಿವಿಮಾತು.