Home » ನ್ಯೂ ಕಾರ್ಕಡ ಶಾಲೆಯಲ್ಲಿ ಇಂಚರ
 

ನ್ಯೂ ಕಾರ್ಕಡ ಶಾಲೆಯಲ್ಲಿ ಇಂಚರ

2024 ಕಾರ್ಯಕ್ರಮ

by Kundapur Xpress
Spread the love

ಕೋಟ: ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳು ಮಾತ್ರ ಪ್ರತಿಭಾವಂತರಾಗುತ್ತಾರೆ ಎಂಬ ಮಿಥ್ಯಯಿಂದ ಪೋಷಕರು ಹೊರಗೆ ಬರಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ ಬದ್ಧತೆ ಹೊಂದಿರುವ ಶಿಕ್ಷಕರು ಮಗುವಿನ ಪ್ರತಿಭೆಯನ್ನು ಗುರುತಿಸಿ ಅದರ ಅಭಿವ್ಯಕ್ತಿಗೆ ಕಾರಣವಾಗುವುದರ ಮೂಲಕ ಬದುಕನ್ನು ಎದುರಿಸುವ ನಿಜವಾದ ಸಾಮರ್ಥ್ಯವನ್ನು ತುಂಬಿದ್ದಾರೆ. ಆದ್ದರಿಂದ ಮಾತೃ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಬೇಕು ಎಂದು ಶ್ರೀ ಕ್ಷೇತ್ರ ಅಂಬಲಪಾಡಿಯ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಕರೆ ನೀಡಿದರು.
ಅವರು ಇತ್ತೀಚಿಗೆ ಹೊಸ ಕಾರ್ಕಡ ಹಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಹಬ್ಬ ಇಂಚರ-2024ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಂದೇಶ ನೀಡಿದರು.
ದತ್ತಿನಿಧಿ ಬಹುಮಾನಗಳನ್ನು ವಿತರಿಸಿದ ಉದ್ಯಮಿ ಆನಂದ .ಸಿ ಕುಂದರ್‍ರವರು ಹಿಂದಿನ ವಿದ್ಯಾರ್ಥಿಗಳು, ಪೋಷಕರು ಮತ್ತು ದಾನಿಗಳು ಶಾಲೆಗಳ ನೆರವಿಗೆ ಬರಬೇಕು. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗಬೇಕೆಂದು ತಿಳಿಸಿದರು.
ಶಾಲೆಯ ಹಿಂದಿನ ಸಂಚಾಲಕರಾಗಿದ್ದ ಲೀಲಾವತಿ ಕಾಮತರ ಭಾವಚಿತ್ರವನ್ನು ನಿವೃತ್ತ ಮುಖ್ಯ ಶಿಕ್ಷಕ ಪಿ.ಶ್ರೀಪತಿ ಹೇರ್ಳೆ ಅನಾವರಣಗೊಳಿಸಿದರು. ಹಿಂದಿನ ವಿದ್ಯಾರ್ಥಿ ಹಾಗೂ ಎಸ್‍ಎಚ್‍ಆರ್‍ಎಫ್ ಯೋಗಬನ ಮೂಡುಗಿಳಿಯಾರು ಇದರ ಮುಖ್ಯ ವೈದ್ಯಾಧಿಕಾರಿ ಡಾ. ಮಾನಸ ಉಡುಪ ಸ್ವಸ್ತಿ ವಾಚನಗೈದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿವೇಕಾನಂದ ಗಾಂವ್‍ಕರ್ ಬಹುಮಾನಗಳನ್ನು ವಿತರಿಸಿದರು.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ವಿಜಯಕುಮಾರ್ ಶೆಟ್ಟಿ ರಾಜ್ಯಮಟ್ಟದಲ್ಲಿ ಭಾಗವಹಿಸಿದ ಶಾಲೆಯ ಕ್ರೀಡಾಳುಗಳನ್ನು ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದಿನ ವಿದ್ಯಾರ್ಥಿ ಹಾಗೂ ಮಣೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಹಿಂದಿನ ವಿದ್ಯಾರ್ಥಿನಿ ಹಾಗೂ ಪಡುಬಿದ್ರೆಯ ಓಂಕಾರ್ ಕಾಸ್ಟ್ಯೂಮ್ಸ್ ಇದರ ಗೀತಾ ಅರುಣರನ್ನು ಸನ್ಮಾನಿಸಲಾಯಿತು.
ವಿವಿಧ ಹಂತದ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ಶಾಲೆಯ ಇಂದಿನ ಮತ್ತು ಹಿಂದಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಭು ಭಟ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಸ್ವಾಗತಿಸಿ ಶಾಲೆಯ ವರದಿಯನ್ನು ಸಭೆಯ ಮುಂದಿಟ್ಟರು. ಶಿಕ್ಷಕ ನಾರಾಯಣ ಆಚಾರ್ ಮತ್ತು
ಸುಮಾ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಸತ್ಯನಾರಾಯಣ ವಂದಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಅಂಗನವಾಡಿಯ ಪುಟಾಣಿಗಳಿಂದ ಹಾಗೂ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಮನರಂಜನಾ ಕಾರ್ಯಕ್ರಮಗಳು ನಡೆದವು.

   

Related Articles

error: Content is protected !!