ಹೊಸದಿಲ್ಲಿ : ಮಿತಿಮೀರಿದ ಆನ್‌ಲೈನ್ ಗೇಮಿಂಗ್ ಹಾವಳಿಯಿಂದ ಜನಸಾಮಾನ್ಯರಿಗೆ ಮುಕ್ತಿ ನೀಡಲು ಆನ್ ಲೈನ್ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ ಉದ್ದೇಶದಿಂದ ಆನ್‌ಲೈನ್ ಗೇಮಿಂಗ್ ಮಸೂದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.
ಇದನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನಗದು ಹಣ ಒಳಗೊಂಡಿರುವ ಕಾರಣ ಅಸ್ಥಿರತೆಯಿಂದ ವ್ಯವಹರಿಸುವ ಆನ್‌ಲೈನ್ ಗೇಮಿಂಗ್ ವಲಯದಲ್ಲಿ ಸ್ಥಿರತೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿಲುವಿಗೆ ಬಂದಿದೆ ಎನ್ನಲಾಗಿದೆ.
ವಿತ್ತ ವರ್ಷ 2024-25ರಲ್ಲಿ, ಹಣಕಾಸು ಕಾಯ್ದೆ-2023ರ ಅನ್ವಯ ಆನ್‌ಲೈನ್ ಗೇಮಿಂಗ್‌ಗಳಲ್ಲಿ ಗೆದ್ದ ನಗದು ಮೊತ್ತದ ಮೇಲೆ ಶೇ.30ರಷ್ಟು ಆದಾಯ ತೆರಿಗೆಯನ್ನು ಕೇಂದ್ರವು ಜಾರಿಗೆ ತಂದಿತ್ತು. 2023ರ ಅ.1ರಿಂದ ನಗದು ಆನ್‌ಲೈನ್ ಗೇಮಿಂಗ್ ಅನ್ನು ಶೇ.28 ಜಿಎಸ್‌ಟಿ ಸ್ತರದೊಳಗೆ ಸೇರಿಸಿತ್ತು. ವಿದೇಶಿ ಆನ್‌ಲೈನ್ ಗೇಮಿಂಗ್ ಅನ್ನು ಇದೇ ಜಿಎಸ್‌ಟಿ ಸ್ತರದಲ್ಲಿ ನಿಯಂತ್ರಿಸಲಾಗುತ್ತಿದೆ,ಕಾನೂನು ಉಲ್ಲಂಘಿಸಿದರೆ 7ವರ್ಷಗಳ ಕಾಲ ಶಿಕ್ಷಾರ್ಹ ಅಪರಾಧವಾಗಿದೆ

