ಉಡುಪಿ: ಉಡುಪಿ ಜಿಲ್ಲೆಯಲ್ಲಿ ಖಾಸಗಿ ವಾಹನಗಳಲ್ಲಿ ಬಾಡಿಗೆ ಆಧಾರದ ಮೇಲೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವುದು ಕಂಡು ಬಂದಲ್ಲಿ ಆರ್. ಟಿ ಓ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಸೂಚನೆ ನೀಡಿದ್ದಾರೆ
ಅವರು ಮಣಿಪಾಲದ ರಜತಾದ್ರಿಯಲ್ಲಿ ನಡೆದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾನೂನು ಕ್ರಮ ಕೈಗೊಳ್ಳಿ
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ ಸಾರ್ವಜನಿಕರ ಸಾಗಾಣಿಕೆಯು ಖಾಸಗಿ ವಾಹನಗಳಲ್ಲಿ ಬಾಡಿಗೆ ಪಡೆದು ಸಂಚರಿಸುತ್ತ ಇರುವುದು ಹೆಚ್ಚು ಕಂಡು ಬರುತ್ತಿದೆ. ಇದರಿಂದ ಸರಕಾರಕ್ಕೆ ತ್ರೈಮಾಸಿಕ ತೆರಿಗೆ ವಂಚನೆ ಆಗುವುದರ ಜೊತೆಗೆ ಅದನ್ನೇ ನಂಬಿ ಜೀವನ ನಡೆಸುವ ಟ್ಯಾಕ್ಸಿ ಚಾಲಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ವಾಹನಗಳಲ್ಲಿ ಚಾಲನೆ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಮತ್ತು ಆರ್‌ಟಿಓ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಆಟೋಚಾಲಕರಿಗೆ ಸೂಚನೆ
ಆಟೋ ಚಾಲಕರು ರಹದಾರಿ ಪಡೆದ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಿಗೆಗೆ ವಾಹನವನ್ನು ಚಾಲನೆ ಮಾಡಬಹುದಾಗಿದ್ದು, ಇವರು ತಮ್ಮ ಕ್ಷೇತ್ರ ವ್ಯಾಪ್ತಿ ಬಿಟ್ಟು ಚಾಲನೆ ಮಾಡಿದಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ