Home » ಇಂದು ಸರ್ವ ರಕ್ಷಣೆಯ ರಕ್ಷಾ ಬಂಧನ
 

ಇಂದು ಸರ್ವ ರಕ್ಷಣೆಯ ರಕ್ಷಾ ಬಂಧನ

ರಕ್ಷಾ ಬಂಧನದ ಶುಭಾಶಯಗಳು

by Kundapur Xpress
Spread the love

ಭರತವರ್ಷ ಎಲ್ಲಾ ಹಬ್ಬಗಳಿಗೂ ವಿಶೇಷ ಮಹತ್ವ ನೀಡಿದೆ.. ನಮ್ಮ ಹಿರಿಯರು ಹಾಕಿಕೊಟ್ಟ ಎಲ್ಲಾ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣ ಇದೆ. ಆಧುನಿಕತೆ ಆಗಸ ಮುಟ್ಟುತ್ತಿದ್ದರೂ ಪ್ರಾಚೀನ ಆಚರಣೆಗಳನ್ನು ಮೂಲತತ್ವ ಉಳಿಸಿಕೊಂಡು ಆಚರಿಸುತ್ತಾ ಬಂದಿದ್ದೇವೆ. ರಕ್ಷಾ ಬಂಧನ ಪವಿತ್ರತೆ ಮತ್ತು ರಕ್ಷಣೆಯ ಸಂಕೇತ. ರಕ್ಷಾ ಬಂಧನ ಎಂದರೆ ಪೌರಾಣಿಕ ಪದ್ಧತಿಯಲ್ಲಿ ವೈದಿಕ ಮಂತ್ರಗಳಿಂದ ಅಭಿಮಂತ್ರಿಸಿ ಮಾಡುವ ಸಂಕಲ್ಪ.. ರಕ್ಷಾಬಂಧನ ಮತ್ತು ಯಜ್ನೋಪವೀತ ಒಂದೇ ದಿನ ಆಚರಿಸುತ್ತಾರೆ.. ಮೂರು ದಾರಗಳು ಆತ್ಮರಕ್ಷೆ, ಧರ್ಮರಕ್ಷೆ, ರಾಷ್ಟ್ರರಕ್ಷೆಯ ಸಂಕಲ್ಪದ ಸೂಚಕ.ಆ ದಿನ ನದಿಯ ನೀರಿನಲ್ಲಿ ನಿಂತು ವಿರಾಟ ಭಾರತದ ಮಹಾನ್ ಪರಂಪರೆಗಳ ಸ್ಮರಣೆ ಮಾಡಿ ಸಂಕಲ್ಪ ಮಾಡುತ್ತಾರೆ.. ಈ ಸಂಕಲ್ಪವನ್ನು ಹೇಮಾದ್ರಿ ಸಂಕಲ್ಪ(ಹಿಮಾಲಯದಷ್ಟು ಮಹಾನ್ ಸಂಕಲ್ಪ ) ಎನ್ನುತ್ತಾರೆ. ಈ ದಿನ ಮನುಷ್ಯರನ್ನು ವಿವಿಧ ಪ್ರಕಾರಗಳ ಪಾಪ, ದುರಾಚಾರ ಮತ್ತು ಸಮಾಜ ಘಾತುಕ ಕಾರ್ಯಗಳಿಂದ ದೂರ ಇಡುವ ಸಂಕಲ್ಪ, ಅಥವಾ ಪ್ರಾಯಶ್ಚಿತ್ತದ ಸಂಕಲ್ಪ, ಪ್ರಾಚೀನ ಭಾರತದ ವನ, ಪರ್ವತಗಳ ಸ್ಮರಣೆ, ತೀರ್ಥ ಕ್ಷೇತ್ರಗಳ, ಶಿವಶಕ್ತಿ ಉಪಾಸನಾ ಕ್ಷೇತ್ರಗಳ, ಪವಿತ್ರ ನದಿಗಳ ಸ್ಮರಣೆ, ಪ್ರಸ್ತುತ ಶ್ರಾವಣ ಮಾಸದ ರಕ್ಷಾ ಬಂಧನದ ದಿನದಂದು ಭಾರತದ ಸಾರ್ವ ಭೌಮಿಕತೆ, ವಿಶ್ವ ಬಂಧುತ್ವದ ಭಾವನೆಗಳು ನಮ್ಮನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಪ್ರೇರಣೆ ಸಿಗಲಿ ಮತ್ತು ರಾಷ್ಟ್ರದಲ್ಲಿ ಯಾವುದೇ ವಿಘಟನಾಕಾರಿ ಶಕ್ತಿಗಳು ತಲೆ ಎತ್ತದಿರಲಿ ಎಂಬ ಸಂಕಲ್ಪ ಮಾಡಿ ಯಜ್ನೋಪವೀತ ಧಾರಣೆ ಮಾಡಿ ಕೈದಾರ ಕೈಗೆ ಕಟ್ಟಿಕೊಂಡು ರಕ್ಷಾ ಬಂಧನ ಆಚರಿಸುತ್ತಿದ್ದರು. ಅನಂತರದ ದಿನಗಳಲ್ಲಿ ಕೇವಲ ಸಹೋದರ ಸಹೋದರಿಯರ ಹಬ್ಬವಾಗಿ ಉಳಿಯಿತು.
ವೈದಿಕ ಸಂಸ್ಕೃತಿಯಲ್ಲಿ 5 ವಸ್ತುಗಳಿಂದ ರಾಖಿ ತಯಾರಿಸಿ ಕಟ್ಟುತ್ತಿದ್ದರು.

1. ಗರಿಕೆ : ವಿಶಾಲವಾಗಿ ಹಬ್ಬುವುದು.. ಒಳ್ಳೆಯತನ ವಿಶಾಲವಾಗಿ ಹಬ್ಬಲಿ ಎಂಬ ಆಶಯ.
2. ಅಕ್ಷತೆ : ಸರ್ವಸಮಾವೇಶಕ, ಸರ್ವಕಾಲಿಕ. ನಶ್ವರ ದೇಹದ ಸ್ಮೃತಿ ಬಿಟ್ಟು ಶಾಶ್ವತ ಆತ್ಮದ ಸ್ಮೃತಿ ಬೆಳೆಸುವ ಉದ್ದೇಶ.
3. ಕೇಸರಿ :ಶಕ್ತಿ ವರ್ಧಕ. ಆತ್ಮಬಲ ವರ್ಧಿಸುವ ಉದ್ದೇಶ
4. ಚಂದನ : ಶೀತಲತೆ, ಸುಗಂಧ. ಆತ್ಮೀಯತೆಯ ಶೀತಲತೆ ಮತ್ತು ಸದ್ಗುಣಗಳ ಸುಗಂಧ ಪಸರಿಸುವ ಉದ್ದೇಶ
5. ಬಿಳಿ ಸಾಸಿವೆ : ತೀಕ್ಷ್ಣ, ರೋಗನಿರೋಧಕ. ನಿರೋಗಿಯಾಗಲಿ ಎಂಬ ಉದ್ದೇಶ
ಈ ಐದೂ ವಸ್ತುಗಳನ್ನು ಶ್ವೇತ ರೇಷ್ಮೆ ವಸ್ತ್ರದಲ್ಲಿ ಸುತ್ತಿ ಕೇಸರಿ ದಾರದಲ್ಲಿ ಕಟ್ಟುತ್ತಿದ್ದರು. ಕೇಸರಿ ತ್ಯಾಗದ ಸಂಕೇತವಾದರೆ ಶ್ವೇತ ಬಣ್ಣ ಶಾಂತಿಯ ಸಂಕೇತ.
ತಿಲಕ ಹಚ್ಚಿ (ಏಕಾಗ್ರತೆ ಹೆಚ್ಚಿ ಆಜ್ಞಾ ಚಕ್ರ ಕ್ರಿಯಾತ್ಮಕ) ಸಿಹಿ ತಿನ್ನಿಸಿ (ಮಧುರವಾದ ಮಾತನಾಡಿ ಜೀವನ ಮಧುರವಾಗಿರಲಿ )ರಕ್ಷಾ ಬಂಧನ ಕಟ್ಟುತ್ತಾರೆ. ಉಡುಗೊರೆ ಕೇಳಬಾರದು. ಯಾವ ಅಪೇಕ್ಷೆಯೂ ಇಲ್ಲದೆ ಕಟ್ಟಿಸಿಕೊಂಡರೆ ಋಣ ಕಡಿಮೆಯಾಗುವುದು. ಕೊಡಲೇಬೇಕು ಎಂದರೆ ಸಾತ್ವಿಕ ಉಪಹಾರ (ಧಾರ್ಮಿಕ ಗ್ರಂಥ, ಸಾಧನೆ ಮಾಡಲು ಸಹಾಯ ಮಾಡುವ ವಸ್ತುಗಳು ) ಕೊಡಬಹುದು. ಸಹೋದರಿಯರು ಸಹೋದರನ ಕಲ್ಯಾಣ, ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಪ್ರಾರ್ಥನೆ ಮಾಡಬೇಕು. ಯೇನ ಬದ್ಧೋ ಬಲಿ ರಾಜಾ ದಾನವೇಂದ್ರ ಮಹಾಬಲ, ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ (ಮಹಾಬಲಿ ದಾನವೀರ ಬಲಿರಾಜ ಬಂಧಿಸಲ್ಪಟ್ಟಿದ್ದ ರಕ್ಷಾಸೂತ್ರದಲ್ಲಿ ನಿನ್ನನ್ನು ಬಂಧಿಸುತ್ತಿರುವೆ, ಹೇ ರಾಖಿ ರಕ್ಷಿಸು)
ರಾಖಿ ಕಟ್ಟುವಾಗ ಕಾಳಜಿಯ ಭಾವನೆ ಇರಬೇಕು. ಆರು ಸಾವಿರ ವರ್ಷಗಳ ಇತಿಹಾಸ ಇರುವ ರಕ್ಷಾ ಬಂಧನ ಸ್ವಂತ ಅಕ್ಕ ತಂಗಿಯರಿಗಾಗಿ ಪ್ರಾರಂಭವಾಗಿದ್ದಲ್ಲ. ನಮ್ಮ ಅಕ್ಕ ತಂಗಿಯರನ್ನಷ್ಟೇ ಅಲ್ಲದೆ ಬೇರೆಯವರ ಅಕ್ಕ ತಂಗಿಯರನ್ನೂ ರಕ್ಷಣೆ ಮಾಡಬೇಕೆಂದು ಪ್ರಾರಂಭವಾಯಿತು. ಪಾಶ್ಚಾತ್ಯ ಜೀವನ ಪದ್ಧತಿಯ ಅಲೆಯಲ್ಲಿ ಕೊಚ್ಚಿ ಭ್ರಮೆಗೊಳಗಾಗಿ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿರುವ ಸಂಧರ್ಭದಲ್ಲಿ ರಕ್ಷಾ ಬಂಧನದಂತಹ ಆಚರಣೆಗಳು, ಸಂಕಲ್ಪಗಳು ಸಮಾಜವನ್ನು ಅಪರಾಧ ಮುಕ್ತ ಮಾಡಬಲ್ಲವು.
ವ್ರಕ್ಷಗಳಿಗೂ ರಕ್ಷೆ ಕಟ್ಟಿ ಪ್ರಕೃತಿ ರಕ್ಷಣೆ ಮಾಡುವ ಸಂಸ್ಕೃತಿ ನಮ್ಮದು.. ಎಲ್ಲಾ ಪ್ರಾಣಿ ಪಕ್ಷಿಗಳ ರಕ್ಷಣೆಯ ಭಾರವೂ ನಮ್ಮದಾಗಿದೆ. ಓಂ, ಸ್ವಸ್ತಿಕ್ ಮತ್ತು ದೇವರ ಮೂರ್ತಿ, ಚಿತ್ರ ಇರುವ ರಾಖಿಗಳನ್ನು ಸಿಕ್ಕಸಿಕ್ಕಲ್ಲಿ ಬಿಸಾಡದೆ ನೀರಿನಲ್ಲಿ ವಿಸರ್ಜಿಸಬೇಕು. ಹಾಗಾಗಿ ಅವುಗಳನ್ನು ಉಪಯೋಗಿಸದೆ ರಾಖಿ ತಯಾರಿಸುವುದು ಒಳ್ಳೆಯದು. ಸಹೋದರಿಯರ ಭಕ್ತಿ, ದೇವರ ಮೇಲಿನ ಭಕ್ತಿ, ಅವರ ಮೇಲೆ ಗುರುಗಳ ಕೃಪೆ ಹೆಚ್ಚಾದಷ್ಟು ಸಹೋದರರ ಅಭ್ಯುದಯ ಹೆಚ್ಚುವುದು. ಪವಿತ್ರ ರಕ್ಷಾ ಬಂಧನದ ದಿನವಾದ ಇಂದು ನಮ್ಮ ಯಾವುದಾದರೂ ಒಂದು ಕೆಟ್ಟ ಅಭ್ಯಾಸವನ್ನು ತ್ಯಜಿಸಿ ಮನಸ್ಸನ್ನು ಸ್ವಚ್ಛಗೊಳಿಸಿ ಅರೋಗ್ಯವಂತ ಸಮಾಜಕ್ಕೆ ನಾಂದಿ ಹಾಡೋಣ.
ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಹಾರ್ಧಿಕ ಶುಭಾಶಯಗಳು
                                                                 

ಸ್ವರ್ಣ ಕುಂದಾಪುರ

   

Related Articles

error: Content is protected !!