Home » ಬಿ.ಎಂ.ಎಸ್. ಸಂಘದಿಂದ ಸಾರಿಗೆ ಸಚಿವರ ಭೇಟಿ
 

ಬಿ.ಎಂ.ಎಸ್. ಸಂಘದಿಂದ ಸಾರಿಗೆ ಸಚಿವರ ಭೇಟಿ

by Kundapur Xpress
Spread the love

ಕುಂದಾಪುರ: ಆಟೋಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರನ್ನು ಭಾರತೀಯ ಆಟೋ ರಿಕ್ಷಾ ಮಜ್ದೂರ್ ಸಂಘ ಮತ್ತು ಬಿ.ಎಂ.ಎಸ್. ನ ವೆಹಿಕಲ್ ಯೂನಿಯನ್‍ಗಳ ಸಂಘಗಳಿಂದ ಇಂದು ಬೆಂಗಳೂರು ವಿಧಾನಸೌಧದಲ್ಲಿ ಸಚಿವರ ಕಛೇರಿಯಲ್ಲಿ ಭೇಟಿ ಮಾಡಲಾಯಿತು. ಈ ಸಂದರ್ಭದಲ್ಲಿ ಈ ಕೆಳಗಿನ ವಿಷಯಗಳಂತೆ ಚಾಲಕರ ಭವಿಷ್ಯಕ್ಕೆ ಪೂರಕವಾಗುವ ಭದ್ರತಾ ಯೋಜನೆಗಳನ್ನು ರೂಪಿಸುವಂತೆ ಕೋರಿಕೊಳ್ಳಲಾಯಿತು.ಕರ್ನಾಟಕ ರಾಜ್ಯದಲ್ಲಿ ಖಾಸಗಿ ಸಾರಿಗೆ ಚಾಲಕರ ಸಮಸ್ಯೆ ಮತ್ತು ಕ್ಷೇಮಾಭಿವೃದ್ಧಿಗೆ ಈ ತನಕ ಯಾವುದೇ ಪಕ್ಷದ ರಾಜ್ಯ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಖಾಸಗಿ ಫೈನಾನ್ಶಿಯರ್‍ಗಳ ಕಿರುಕುಳದಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಸಾರಿಗೆ ಚಾಲಕರನ್ನು ಕೀಳಾಗಿ ಕಾಣುತ್ತಿದೆ ಎಂದು ನಮಗೆ ಅನಿಸುತ್ತಿದೆ.

ಆಟೋ ಮತ್ತು ಖಾಸಗಿ ಸಾರಿಗೆ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ ಭಾರತ್ ಪ್ರೈವೇಟ್ ಟ್ರಾನ್ಸ್‍ಪೋರ್ಟ್ ಮಜ್ದೂರ್ ಮಹಾಸಭಾ ಆಂದೋಲನಕ್ಕೆ ಸಿದ್ಧತೆ ನಡೆಸಲಾಗಿದೆ. ಇದರ ಅಡಿಯಲ್ಲಿ ನಾವು ನಮ್ಮ ಸಮಸ್ಯೆಯ ಬಗ್ಗೆ ತಿಳಿಸುವ ಜ್ಞಾಪಕ ಪತ್ರವನ್ನು ತಮ್ಮ ಗಮನಕ್ಕೆ ನೀಡುತ್ತಿದ್ದೇವೆ. ಆದ್ದರಿಂದ ನೀವು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಉಪಕ್ರಮವನ್ನು ತೆಗೆದುಕೊಳ್ಳಲು ಮತ್ತು ಸಾರಿಗೆ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿ ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಕೆಳಗಿನಂತೆ ಬೇಡಿಕೆ ಸಲ್ಲಿಸುತ್ತಿದ್ದೇವೆ.

ಬೇಡಿಕೆಗಳು:

ಆಟೋ ಹಾಗೂ ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು.
ಸಾರಿಗೆ ವಾಹನಗಳ ವಿಮೆಯನ್ನು ಶೇ. 50 ರಷ್ಟು ಕಡಿಮೆ ಮಾಡಬೇಕು.
ಆಟೋ ಮೀಟರ್ ಚಾರ್ಜ್ 30% ಹೆಚ್ಚಿಸಬೇಕು.
ವಸತಿ ರಹಿತ ಎಲ್ಲಾ ಚಾಲಕರಿಗೂ ವಸತಿ ಸೌಕರ್ಯ ಕಲ್ಪಿಸಬೇಕು.
ರಾಜ್ಯದಲ್ಲಿ ಈಗ ಹೊಸದಾಗಿ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರ ಬದುಕು ಬೀದಿಗೆ ಬಂದಿರುತ್ತದೆ. ಆದ್ದರಿಂದ ಆಟೋ ಚಾಲಕರ ಬದುಕಿಗೆ ಪೂರಕವಾಗುವ ಯೋಜನೆಯನ್ನು ಕಾರ್ಯಗತಗೊಳಿಸಬೇಕು.
ವಾಹನ ಕ್ಲೈಮ್ ಸಮಯದಲ್ಲಿ ಬ್ಯಾಡ್ಜ್ ಕಡ್ಡಾಯ ಬೇರೆ ರಾಜ್ಯಗಳಂತೆ ಕೈ ಬಿಡಬೇಕು.
ಇಡೀ ರಾಜ್ಯದಲ್ಲಿ ಚಾಲಕ ಬಂದು ಯೋಜನೆ ಆರಂಭಿಸಬೇಕು.
ಆಟೋ ಚಾಲಕರ ಮಕ್ಕಳಿಗೆ ಈ ಹಿಂದಿನ ಸರಕಾರ ನೀಡಿರುವ ವಿಧ್ಯಾನಿಧಿ ಯೋಜನೆ ಮರು ಜಾರಿಗೊಳಿಸಬೇಕಾಗಿ ಆಗ್ರಹ.
ಆಟೋ ಚಾಲಕರ ಉದ್ಯೋಗಕ್ಕೆ ಧಕ್ಕೆ ತರುವ ಅಕ್ರಮ ಓಲಾ, ಉಬರ್ ಮತ್ತು ರ್ಯಾಪಿಡೋ ಬೈಕ್‍ಗಳನ್ನು ನಿಷೇಧಿಸಬೇಕು.
ಆರ್.ಟಿ.ಓ. ಕಛೇರಿಗಳಲ್ಲಿ ಬ್ರೋಕರ್ ವ್ಯವಸ್ಥೆ ನಿಲ್ಲಿಸಬೇಕು.
ಆರ್.ಟಿ.ಓ. ಮತ್ತು ಸರಕಾರ ಹೆಚ್ಚಿಸಿರುವ ಚಲನ್‍ನನ್ನು ಶೇ. 50ಕ್ಕೆ ಇಳಿಸಬೇಕು.
ವಾಹನಗಳನ್ನು ಖರೀದಿಸಲು ಮತ್ತು ಫೈನಾನ್ಸ್‍ಗಳ ಶೋಷಣೆಯನ್ನು ತಡೆಯಲು ಬ್ಯಾಂಕುಗಳ ಮೂಲಕ ಮುದ್ರಾ ಸಾಲವನ್ನು ವ್ಯವಸ್ಥೆಗೊಳಿಸಬೇಕು.
ಹಳೆಯ ವಾಹನವನ್ನು 15 ವರ್ಷದಿಂದ 20 ವರ್ಷಗಳ ನಂತರ ರದ್ದುಗೊಳಿಸಬೇಕು.
ಉನ್ನತ ಶಿಕ್ಷಣಕ್ಕಾಗಿ ಚಾಲಕನ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶುಲ್ಕದಲ್ಲಿ ಶೇ. 50 ರಷ್ಟು ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಬೇಕು.
ಉಚಿತ ಆರೋಗ್ಯ ಚಿಕಿತ್ಸೆಯನ್ನು ಆಟೊ ಚಾಲಕರು ಹಾಗೂ ಕುಟುಂಬದವರಿಗೆ ರಾಜ್ಯ ಸರ್ಕಾರದ ವತಿಯಿಂದ ಇತರ ರಾಜ್ಯಗಳಲ್ಲಿರುವಂತೆ (ಉದಾ: ತಮಿಳುನಾಡು, ಕೇರಳ) ಜಾರಿಗೊಳಿಸಬೇಕು. ವೃದ್ಧಾಪ್ಯ ಪಿಂಚಣಿ ಮತ್ತು ಜೀವವಿಮೆ ಚಾಲಕರಿಗೆ ಲಭಿಸಬೇಕು.
ರಾಜ್ಯದ ಎಲ್ಲಾ ಖಾಸಗಿ ಸಾರಿಗೆ ಚಾಲಕರಿಗೆ 10 ಲಕ್ಷ ರೂಪಾಯಿ ಅಪಘಾತ ವಿಮೆ ನೀಡಬೇಕು.
ಆಟೋ ಚಾಲಕರಿಗೆ ಇಂದನ ರಿಯಾಯಿತಿ ಅಥವಾ ಸಬ್ಸಿಡಿ ದರದಲ್ಲಿ ಇಂಧನವನ್ನು ನೀಡುವಂತೆ ಆಗ್ರಹಿಸುತ್ತಿದ್ದೇವೆ.
ಎಲ್ಲಾ ಆಟೋ ಮತ್ತು ಟೂರಿಸ್ಟ್ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಬೇಕು.
ಆಟೋ ಚಾಲಕರ ಮೇಲೆ ಆರ್.ಟಿ.ಓ. ಮತ್ತು ಸಂಚಾರಿ ಪೊಲೀಸರ ದಬ್ಬಾಳಿಕೆಯನ್ನು ನಿಲ್ಲಿಸಬೇಕು.
ಓಲಾ ಮತ್ತು ಉಬರ್ ಕಂಪೆನಿಗಳ ಶೋಷಣೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೋಷಣೆಯನ್ನು ನಿಲ್ಲಿಸಬೇಕು.
ರಾಷ್ಟ್ರವ್ಯಾಪಿ ಟ್ಯಾಕ್ಸಿಗಳ ಮೇಲೆ ಏಕರೂಪದ ಅಂತರಾಜ್ಯ ತೆರಿಗೆ ಇರಬೇಕು.
ಹೆದ್ದಾರಿಯಲ್ಲಿ ಲಾರಿ ಮತ್ತು ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಗ್ರಹಗಳನ್ನು ನಿರ್ಮಿಸಬೇಕು.

ಕರ್ನಾಟಕ ಸರಕಾರ ಮೇಲ್ಕಂಡ ಬೇಡಿಕೆಗಳನ್ನು ಇತ್ಯರ್ಥಗೊಳಿಸದಿದ್ದಲ್ಲಿ ಮುಂಬರುವ ದಿನದಲ್ಲಿ ಭಾರತೀಯ ಖಾಸಗಿ ಸಾರಿಗೆ ಮಜ್ಧೂರ್ ಮಹಾಸಂಘವು ಎಲ್ಲಾ ಖಾಸಗಿ ಸಾರಿಗೆ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾದ್ಯಾಂತ ಸಾರಿಗೆ ಬಂದ್ ನಡೆಸಲಿದೆ. ಹೀಗಾಗಿ ಕೂಡಲೆ ಖಾಸಗಿ ಸಾರಿಗೆ ಕಾರ್ಮಿಕ ಸಂಘಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆಗ್ರಹ ಮಾಡುತ್ತೇವೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕರಾದ ಯಶ್‍ಪಾಲ್ ಸುಮರ್ಣ, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಬಿ.ಪಿ.ಟಿ.ಎಮ್.ಎಮ್. ನ ರಾಷ್ಟ್ರೀಯ ಸದಸ್ಯರಾದ ಸುರೇಶ್ ಪುತ್ರನ್ ಕುಂದಾಪುರ, ಬಿ.ಎಮ್.ಎಸ್. ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಕುಂದಾಪುರ ಆಟೋರಿಕ್ಷಾ ಮಜ್ದೂರ್ ಸಂಘದ ಅಧ್ಯಕ್ಷರಾದ ಮಂಜುನಾಥ್ ಪ್ರಧಾನ ಕಾರ್ಯದರ್ಶಿ ರವಿ ಪುತ್ರನ್, ಉಪಾಧ್ಯಕ್ಷರಾದ ರಾಘವೇಂದ್ರ ತ್ರಾಸಿ, ವಿಜಯ್ ಜೊತೆಕಾರ್ಯದರ್ಶಿ, ಗುರುರಾಜ್ ಸಂಘಟನಾ ಕಾರ್ಯದರ್ಶಿ, ಬಿ.ಎಮ್.ಎಸ್. ದಕ್ಷಿಣ ಕನ್ನಡ ಜಿಲ್ಲಾ ಜೊತೆಕಾರ್ಯದರ್ಶಿ ಶಾಂತಪ್ಪ ಕಲ್ಮಂಜ, ಬೆಳ್ತಂಗಡಿ ತಾಲೂಕು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಕೃಷ್ಣ ಬೆಳಾಲು, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ., ಪ್ರಶಾಂತ್ ಗರ್ಡಾಡಿ, ಬಂಟ್ವಾಳ ಆಟೋರಿಕ್ಷಾ ಚಾಲಕ ಸಂಘದ ಪ್ರಧಾನ ಕಾರ್ಯದಶಿ, ಕೃಷ್ಣ ಕುಮಾರ್ ಹಾಗೂ ವೇಣೂರು ವಲಯದ ರಿಕ್ಷಾಚಾಲಕ ಸಂಘದ ಅಧ್ಯಕ್ಷರಾದ ವಸಂತ ಮಡಿವಾಳ, ರಮೇಶ್ ಉಜಿರೆ, ಇತರೆ ಬಿ.ಎಂ.ಎಸ್. ವೆಹಿಕಲ್ ಯೂನಿಯನ್‍ಗಳ ಪ್ರಮುಖರು ಉಪಸ್ಥಿತರಿದ್ದರು.

   

Related Articles

error: Content is protected !!