ವೇಣೂರು : ಇಂದಿನ ಕಾಲಘಟ್ಟದಲ್ಲಿ ಸಿದ್ಧಾಂತವನ್ನು ಉಳಿಸುವುದಕ್ಕಿಂತ ಪಾಲಿಸುವುದು ಮುಖ್ಯವಾಗಿದೆ ಎಂದು ಹೊಂಬುಜ ಜೈನ ಮಠದ ಡಾ. ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.ಅವರು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಮೂರನೇ ದಿನವಾದ ಶನಿವಾರದಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನವಿತ್ತರು.
ಧರ್ಮವನ್ನು ರಕ್ಷಿಸುವುದೆಂದರೆ ನಾವು ಧರ್ಮವನ್ನು ಪಾಲಿಸುವುದರಿಂದ ಮಾತ್ರ ಸಾಧ್ಯ. ನಮ್ಮ ಅಂತರಂಗ ಬಹಿರಂಗ ಆಚರಣೆ ಅಹಿಂಸೆಯಿಂದ ಕೂಡಿರಬೇಕು. “ಯಾವುದೇ ವಿಚಾರಗಳನ್ನು ಅನೇಕ ದೃಷ್ಟಿಕೋನಗಳಿಂದ ವ ತಿಳಿದುಕೊಂಡು ತ್ಯಾಗದ ಮೂಲಕ ಆತ್ಮಕಲ್ಯಾಣ ಮಾಡಿಕೊಂಡಾಗ ಶ್ರೇಷ್ಠನಾಗಬಹುದು. ತ್ಯಾಗದ ಸಂದೇಶ ಪಸರಿಸಲು ಮತ್ತು ನೈತಿಕತೆ ಉಳಿಯಲು ದೇಶಾದ್ಯಂತ ಬಾಹುಬಲಿಯ ಮೂರ್ತಿಗಳು ಸ್ಥಾಪನೆಯಾಗಿವೆ. ತೀರ್ಥಂಕರರು ಧರ್ಮಪ್ರಭಾವಕರೇ ಹೊರತು ಪ್ರಚಾರಕರಲ್ಲ ಎಂಬ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜನಿಗೆ ತ್ಯಾಗ ಬುದ್ದಿ ಇರಬೇಕು. ರಾಜನು ಧರ್ಮ ನಿಭಾಯಿಸಬೇಕು. ಸ್ವಾಭಿಮಾನಿಯಾಗಿದ್ದು ರಾಷ್ಟ್ರ ರಕ್ಷಣೆಗಾಗಿ ಮಾತ್ರ ಯುದ್ಧವನ್ನು ಮಾಡಬೇಕು ಸಹೋದರರು ಪರಸ್ಪರ ಜಗಳ ಮಾಡಬಾರದು. ಹಿರಿಯರನ್ನು ಗೌರವಿಸಬೇಕು ಎಂದು ತೋರಿಸಿಕೊಟ್ಟ ಬಾಹುಬಲಿ ತತ್ವ ಸಿದ್ಧಾಂತ ಸತ್ಯವನ್ನು ಎತ್ತಿ ಹಿಡಿದಿದೆ. ಅಹಿಂಸೆ ತ್ಯಾಗದಿಂದ ನಡೆಯುವವರು ದೇಶವನ್ನು ಆಳಲು ಸಮರ್ಥರು ಎಂಬುದು ಇತಿಹಾಸ ತೋರಿಸಿಕೊಟ್ಟಿದೆ ಎಂದರು.