ಕೋಟ : ಇಲ್ಲಿನ ಕೋಟದ ಅಮೃತೇಶ್ವರೀ ಶ್ರೀ ದೇವಳದ ದಶಾವತಾರ ಮೇಳದ 2024-25ನೇ ವರ್ಷದ ತಿರುಗಾಟವು ಭಾನುವಾರ ಆರಂಭಗೊಂಡಿತು. ಈ ಹಿನ್ನಲ್ಲೆಯಲ್ಲಿ ದೇಗುಲದಲ್ಲಿ ಪೂರ್ವಾಹ್ನ ಗಣಹೋಮ ಮತ್ತು ಗಣಪತಿ ಪೂಜೆ ,ರಾತ್ರಿ ದೇವರ ಪ್ರಥಮ ಸೇವೆ ಸಂಪನ್ನಗೊಂಡಿತು.
ರಾತ್ರಿ ನಡೆದ ವಿವಿಧ ಯಕ್ಷ ಸಾಧಕರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ವಹಿಸಿ ಮಾತನಾಡಿ ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಹಂದೆ ಹಾಗೂ ಕೃಷ್ಣ ನಾಯ್ಕ್ ಹಾಲಾಡಿ ಕೊಡುಗೆ ಅನನ್ಯ ,ಸಾಂಪ್ರದಾಯಿಕ ಯಕ್ಷಗಾನ ಮೌಲ್ಯಗಳನ್ನು ಕಲಾ ಕ್ಷೇತ್ರಕ್ಕೆ ಧಾರೆ ಎರೆಯುವ ಜತೆಗೆ ಯುವ ಆಸಕ್ತ ಮನಸ್ಸುಗಳಿಗೆ ಕಲಾಕಾಣಿಕೆಯನ್ನು ನೀಡಿದ್ದಾರೆ, ಅಂತಯೇ ಅಮೃತೇಶ್ಚರಿ ಯಕ್ಷಗಾನ ಮೇಳ ತನ್ನದೆ ಆದ ಯಕ್ಷ ಚೌಕಟ್ಟಿನೊಂದಿಗೆ ಕಲಾಭಿಮಾನಿಗಳ ಹಾಗೂ ಹರಕೆ ಸಲ್ಲಿಸುವವರ ಮನ ಗೆದ್ದಿದೆ ಎಂದರು
ಶ್ರೀ ಕ್ಷೇತ್ರದಿಂದ ನೀಡುವ ಪ್ರಾಚಾರ್ಯ ದಿ| ಎಮ್. ನಾರ್ಣಪ್ಪ ಉಳ್ಳೂರ ಪ್ರಶಸ್ತಿ ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಎಚ್. ಶ್ರೀಧರ ಹಂದೆ ಹಾಗೂ ದಿ. ಕೋಟ ವೈಕುಂಠ ಸ್ಮರಣಾರ್ಥ ಅವರ ಪುತ್ರ ಉಮೇಶ್ ರಾಜ್ ಬೆಂಗಳೂರು ಇವರು ನೀಡುವ ಕೋಟ ಯಕ್ಷಕಿನ್ನರ ಕೋಟ ವೈಕುಂಠ ಪುರಸ್ಕಾರವನ್ನು ಕೃಷ್ಣ ನಾಯ್ಕ ಹಾಲಾಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶುಭಾಶಂಸನೆಯನ್ನು ಸಾಹಿತಿ ಪ್ರೊ. ಉಪೇಂದ್ರ ಸೋಮಯಾಜಿ ಚಿತ್ರಪಾಡಿ, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು, ನಲ್ನುಡಿಗಳ್ನಾಡಿದರು.
ದೇಗುಲದ ಯಕ್ಷಗಾನ ಮೇಳಕ್ಕೆ ಶ್ರೀದೇವಿಯ ಬೆಳ್ಳಿ ಪ್ರಭಾವಳಿ ಇರುವ ಮೂರ್ತಿಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಮೇಳಕ್ಕೆ ಹಸ್ತಾಂತರಿಸಿದರು.
ಮುಖ್ಯ ಅಭ್ಯಾಗತರಾಗಿ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತ್, ಉದ್ಯಮಿ ಉಮೇಶ್ ರಾಜ್ ಬೆಂಗಳೂರು,ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ಶೆಟ್ಟಿ,ಎಂ.ಶಿವ ಪೂಜಾರಿ,ರತನ್ ಐತಾಳ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರ ಆಚಾರ್ ಸ್ವಾಗತಿಸಿ ನಿರೂಪಿಸಿದರು.ಸದಸ್ಯರಾದ ಗಣೇಶ್ ನೆಲ್ಲಿಬೆಟ್ಟು ಸಹಕರಿಸಿದರು.